ಸಂಜೆಯ ಕಾಫಿ/ ಚಹಾ ಜೊತೆಗೆ ಇದೊಂದು ಸರಳವಾದ ಮತ್ತು ಸವಿಯಾದ ಕರಿದ ತಿಂಡಿ.
ಸಂಜೆಯ ಕಾಫಿ/ ಚಹಾ ಜೊತೆಗೆ ಇದೊಂದು ಸರಳವಾದ ಮತ್ತು ಸವಿಯಾದ ಕರಿದ ತಿಂಡಿ. ಇದನ್ನು ಹಾಗೆಯೇ ತಿನ್ನಬಹುದು ಅಥವಾ ಚಟ್ನಿಯ ಜೊತೆಗೂ ನಂಚಿಕೊಂಡು ತಿನ್ನಬಹುದು.
ಬೇಕಾದ ಸಾಮಾಗ್ರಿಗಳು
ಮೈದಾ ಹಿಟ್ಟು- ಒಂದು ಕಪ್;
ಮೊಸರು- ಅರ್ಧ ಕಪ್;
ಉಪ್ಪು- ಒಂದು ಟೀ ಸ್ಪೂನ್;
ಸಣ್ಣಗೆ ಹೆಚ್ಚಿದ ಕೊಬ್ಬರಿ ತುಣುಕುಗಳು- ಒಂದು ಸ್ಪೂನು;
ಅಷ್ಟೇ ಪ್ರಮಾಣದಲ್ಲಿ ಸಣ್ಣಗೆ ಹೆಚ್ಚಿದ ಕರಿಬೇವಿನ ಸೊಪ್ಪು ಹಾಗೂ ಹಸಿಮೆಣಸಿನ ಕಾಯಿ;
ಒಂದು ಚಿಟಿಕೆ ಅಡುಗೆ ಸೋಡಾ.
ಮಿಕ್ಸಿಂಗ್ ಬೌಲ್ ನಲ್ಲಿ(ಮೊಸರು ಹಾಕಿ) ಮೇಲೆ ತಿಳಿಸಿದ ಎಲ್ಲಾ ವಸ್ತುಗಳನ್ನೂ ಹಾಕಿ, ಸ್ವಲ್ಪ ಸ್ವಲ್ಪವೇ ನೀರು ಸೇರಿಸುತ್ತಾ ಚಪಾತಿ ಹಿಟ್ಟಿನಂತೆ ಕಲಸಿಕೊಳ್ಳಬೇಕು. ಆ ಬಳಿಕ ಮೊಸರನ್ನು ಸೇರಿಸಿ ಮತ್ತೊಮ್ಮೆ ಚೆನ್ನಾಗಿ ಕಲಸಿಕೊಳ್ಳಬೇಕು. ಆ ಹಿಟ್ಟು ಮೃದುವಾಗಿ ಇರಬೇಕು. ಈ ಮಿಶ್ರಣವನ್ನು ಕನಿಷ್ಠ ಅರ್ಧ ಗಂಟೆ ಕಾಲ ಹಾಗೆಯೇ ಇಡಬೇಕು.
ಒಂದು ಬಾಂಡ್ಲಿಯಲ್ಲಿ ಸಾಕಷ್ಟು ಅಡುಗೆ ಎಣ್ಣೆಯನ್ನು ಹಾಕಿ, ಸಣ್ಣ ಉರಿಯಲ್ಲಿ ಬಿಸಿ ಮಾಡಬೇಕು. ಬಳಿಕ ಕಲಸಿ ಇಟ್ಟಿರುವ ಹಿಟ್ಟನ್ನು ನೆಲ್ಲಿಕಾಯಿ ಗಾತ್ರದಲ್ಲಿ ಸ್ವಲ್ಪ ಸ್ವಲ್ಪವೇ ತೆಗೆದುಕೊಂಡು ಎಣ್ಣೆಯಲ್ಲಿ ಹಾಕಿ,ಕಂದು ಬಣ್ಣ ಬರುವವರೆಗೆ ಕರಿಯಬೇಕು. ಈಗ ಬಿಸಿ ಬಿಸಿಯಾದ ಗೋಳಿ ಬಜೆ ಸವಿಯಲು ಸಿದ್ಧ.
-ವೈಭವಿ ಶಿವತ್ತಾಯ