Melinda resigns as Gates foundation co-chairwoman: ಬಿಲ್ ಗೇಟ್ಸ್ ಅವರ ಮಾಜಿ ಪತ್ನಿ ಮೆಲಿಂದಾ ಫ್ರೆಂಚ್ ಗೇಟ್ಸ್ ಅವರು ಗೇಟ್ಸ್ ಫೌಂಡೇಶನ್ನಿಂದ ಹೊರಬರುತ್ತಿದ್ದಾರೆ. ಡಿವೋರ್ಸ್ ಆಗಿ ಮೂರು ವರ್ಷದ ಬಳಿಕ ಅವರು ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಈ ಹಿಂದೆ ಮಾಡಿಕೊಂಡಿದ್ದ ಒಪ್ಪಂದದ ಪ್ರಕಾರ ಬಿಲ್ ಅಂಡ್ ಮೆಲಿಂಡಾ ಗೇಟ್ಸ್ ಫೌಂಡೇಶನ್ನಿಂದ ಹೊರಹೋದರೆ ಸಿಗಬೇಕಿರುವ 12.5 ಬಿಲಿಯನ್ ಡಾಲರ್ ಹಣ ಮೆಲಿಂದಾ ಪಾಲಾಗಲಿದೆ. ತಮ್ಮ ಎಕ್ಸ್ ಖಾತೆಯಲ್ಲಿ ಅವರು ಈ ವಿಚಾರವನ್ನು ದೃಢಪಡಿಸಿದ್ದಾರೆ. ತಾವೇ ಸ್ಥಾಪಿಸಿರುವ ಪೈವೋಟಲ್ ವೆಂಚರ್ಸ್ನ ಚಟುವಟಿಕೆಗಳತ್ತ ಮೆಲಿಂದಾ ಗಮನ ಹರಿಸಲಿದ್ದಾರೆ.
ನ್ಯೂಯಾರ್ಕ್, ಮೇ 14: ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್ ಅವರ ವಿಚ್ಛೇದಿತ ಪತ್ನಿ ಮೆಲಿಂದಾ ಫ್ರೆಂಚ್ ಗೇಟ್ಸ್ ಅವರು ಗೇಟ್ಸ್ ಫೌಂಡೇಶನ್ನಿಂದ (Bill & Melinda Gates Foundation) ನಿರ್ಗಮಿಸಲಿದ್ದಾರೆ. 2021ರಲ್ಲಿ ಬಿಲ್ ಗೇಟ್ಸ್ ಅವರಿಗೆ ಡಿವೋರ್ಸ್ ಕೊಟ್ಟಿದ್ದ ಮೆಲಿಂದಾ ಗೇಟ್ಸ್ 3 ವರ್ಷಗಳ ಬಳಿಕ ಫೌಂಡೇಶನ್ನಿಂದ ಹೊರ ಹೋಗುತ್ತಿದ್ದಾರೆ. ಬಿಲ್ ಗೇಟ್ಸ್ ಮತ್ತು ಮೆಲಿಂದಾ ಗೇಟ್ಸ್ ಇಬ್ಬರೂ ಸೇರಿ ಈ ಬಿಲ್ ಅಂಡ್ ಮೆಲಿಂಡಾ ಗೇಟ್ಸ್ ಫೌಂಡೇಶನ್ ಕಟ್ಟಿದ್ದರು. ಈ ಫೌಂಡೇಶನ್ಗೆ ಮೆಲಿಂದಾ ಸಹ-ಛೇರ್ಮನ್ ಆಗಿದ್ದಾರೆ. ಈ ಹಿಂದೆ ಮಾಡಿಕೊಳ್ಳಲಾಗಿದ್ದ ಒಪ್ಪಂದದ ಪ್ರಕಾರ ಮೆಲಿಂದಾ ಫ್ರೆಂಚ್ ಗೇಟ್ಸ್ ಅವರು ಫೌಂಡೇಶನ್ನಿಂದ ಹೊರಹೋಗುವುದರೊಂದಿಗೆ 12.5 ಬಿಲಿಯನ್ ಡಾಲರ್ ಹಣವನ್ನೂ ಪಡೆದು ಹೋಗಲಿದ್ದಾರೆ. ಅಂದರೆ ಹೆಚ್ಚೂಕಡಿಮೆ ಒಂದು ಲಕ್ಷ ರೂನಷ್ಟು ಹಣವು ಬಿಲ್ ಗೇಟ್ಸ್ ಅವರ ಮಾಜಿ ಪತ್ನಿಗೆ ಸಿಗಲಿದೆ.
ಈ ನಿರ್ಧಾರವನ್ನು ತೆಗೆದುಕೊಳ್ಳುವುದು ಬಹಳ ಕಷ್ಟವಾಯಿತು. ಬಿಲ್ ಮತ್ತು ನಾನು ಇಬ್ಬರೂ ಸೇರಿ ಸ್ಥಾಪಿಸಿದ ಫೌಂಡೇಶನ್ ಬಗ್ಗೆ ಹೆಮ್ಮೆ ಇದೆ. ಜಾಗತಿಕವಾಗಿ ಇರುವ ಅಸಮಾನತೆಯ ಸಮಸ್ಯೆ ನೀಗಿಸಲು ಇದು ಅಸಾಧಾರಣ ಕೆಲಸ ಮಾಡುತ್ತಿದ್ದು ಅದರ ಬಗ್ಗೆಯೂ ಹೆಮ್ಮೆ ಇದೆ,’ ಎಂದು ಮೆಲಿಂದಾ ಫ್ರೆಂಚ್ ಗೇಟ್ಸ್ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.
‘ನನ್ನ ಸಾಮಾಜಿಕ ಕೈಂಕರ್ಯಗಳ (Philanthropy) ಮುಂದಿನ ಅಧ್ಯಾಯ ಆರಂಭಿಸಲು ಇದು ಸರಿಯಾದ ಸಮಯ ಎನಿಸುತ್ತದೆ’ ಎಂದು ಹೇಳಿರುವ ಮೆಲಿಂಡಾ ತಾನು ಈ ನಿರ್ಗಮನಕ್ಕೆ ಬದಲಾಗಿ 12.5 ಬಿಲಿಯನ್ ಡಾಲರ್ ಹಣ ಪಡೆಯಲಿರುವುದನ್ನು ದೃಢಪಡಿಸಿದ್ದಾರೆ. ಮೆಲಿಂದಾ ಗೇಟ್ಸ್ ಅವರು ಪೈವೋಟಲ್ ವೆಂಚರ್ಸ್ ಎಂಬ ಸಂಸ್ಥೆಯನ್ನು ಹೊಂದಿದ್ದಾರೆ. ನಾನ್ ಪ್ರಾಫಿಟ್ ಅಲ್ಲವಾದರೂ ಮಾನವ ಹಕ್ಕು ಇತ್ಯಾದಿ ಕಾರ್ಯಗಳಿಗೆ ಪ್ರೇರೇಪಿಸಲೆಂದು ಸ್ಥಾಪಿಸಲಾಗಿರುವ ಈ ಕಂಪನಿಯಲ್ಲಿ ಮೆಲಿಂದಾ ತಮ್ಮ ಈ ಹಣವನ್ನು ಬಳಸಲಿದ್ದಾರೆ.