ಬೆಂಗಳೂರು: ಬಿಎಂಆರ್ಸಿಎಲ್ (ಬೆಂಗಳೂರು ಮೆಟ್ರೋ ರೈಲು ನಿಗಮ) ಹೊರಡಿಸಿದ ಮಾಹಿತಿಯಂತೆ, ಹಸಿರು ಮಾರ್ಗದ ಪೀಣ್ಯ ಇಂಡಸ್ಟ್ರಿ ಟು ನಾಗಸಂದ್ರ ಮೆಟ್ರೋ ಮಾರ್ಗದಲ್ಲಿ ಸಂಚಾರಕ್ಕೆ ತಾತ್ಕಾಲಿಕ ಸ್ಥಗಿತಗೊಳಿಸಲಾಗುತ್ತಿದೆ. ನಾಗಸಂದ್ರ-ಮಾದಾವರ ನಡುವೆ ಸಿಗ್ನಲ್ ಪರೀಕ್ಷಾ ಕಾರ್ಯಗಳು ನಡೆಯುತ್ತಿರುವ ಹಿನ್ನೆಲೆ, ಈ ನಿರ್ಧಾರ ಕೈಗೊಳ್ಳಲಾಗಿದೆ.
ಈ ತಾತ್ಕಾಲಿಕ ಸಂಚಾರ ಸ್ಥಗಿತವು ಆಗಸ್ಟ್ 20, 23, 30 ಹಾಗೂ ಸೆಪ್ಟೆಂಬರ್ 6 ಮತ್ತು 11ರಂದು ಪೂರ್ಣ ದಿನ ನಡೆಯಲಿದೆ.
ಆಗಸ್ಟ್ 24 ರಂದು, ನಾಗಸಂದ್ರ ಮೆಟ್ರೋ ನಿಲ್ದಾಣದಿಂದ ಪೀಣ್ಯ ಇಂಡಸ್ಟ್ರಿಯ ಕಡೆಗೆ ಸಂಚರಿಸುವ ಕೊನೆಯ ರೈಲು ಸೇವೆ ರಾತ್ರಿ 11:05 ಕ್ಕೆ ಬದಲಾಗಿ 10:00 ಗಂಟೆಗೆ ಸ್ಥಗಿತಗೊಳ್ಳಲಿದೆ. ಜೊತೆಗೆ, ಆಗಸ್ಟ್ 25 ರಂದು, ಬೆಳಿಗ್ಗೆ 5:00 ಕ್ಕೆ ಪ್ರಾರಂಭವಾಗಬೇಕಿದ್ದ ಮೆಟ್ರೋ ಸಂಚಾರ 6:00 ಕ್ಕೆ ಪ್ರಾರಂಭವಾಗಲಿದೆ.
ನೇರಳೆ ಮಾರ್ಗದಲ್ಲಿ ಯಾವುದೇ ಬದಲಾವಣೆ ಇರದಿದ್ದು, ಹಸಿರು ಮಾರ್ಗದ ಪ್ರಯಾಣಿಕರು ಬಿಎಂಆರ್ಸಿಎಲ್ ಪ್ರಕಟಣೆಗಳೊಂದಿಗೆ ತಮ್ಮ ಪ್ರಯಾಣವನ್ನು ಹೊಂದಿಸಿಕೊಳ್ಳುವಂತೆ ಮನವಿ ಮಾಡಲಾಗಿದೆ.