ನವದೆಹಲಿ : ಭಕ್ತಿಭಾವದ ಪ್ರತೀಕವಾದ ರಾಮಮಂದಿರ ಉದ್ಘಾಟನೆಯಾಗಿ ಒಂದು ವರ್ಷವಾಗುತ್ತಿದ್ದು, ಹೀಗಾಗಿ ದೇವಾಲಯದ ಕಾಮಗಾರಿಯನ್ನು ತೀವ್ರಗತಿಯಲ್ಲಿ ಮಾಡಲಾಗುತ್ತಿದೆ. ಇದೇ ಸಮಯದಲ್ಲೇ ಅಯೋಧ್ಯೆಯ ರಾಮಮಂದಿರದ ಮೇಲೆ ದಾಳಿ ನಡೆಸುವ ಬೆದರಿಕೆಯನ್ನು ಹಾಕಲಾಗಿದೆ. ರಾಮಮಂದಿರ ಸೇರಿದಂತೆ ದೇಶದ ಹಲವು ದೇವಾಲಯಗಳನ್ನು ಗುರಿಯಾಗಿಸಿ ದಾಳಿ ಮಾಡುವುದಾಗಿ ಖಲಿಸ್ತಾನಿ ಉಗ್ರ ಪನ್ನುನ್ ಬೆದರಿಕೆ ಹಾಕಿದ್ದಾನೆ.
ಸಿಖ್ ಫಾರ್ ಜಸ್ಟೀಸ್ ಎಂಬ ಸಂಘಟನೆಯು ವಿಡಿಯೋವೊಂದನ್ನು ಬಿಡುಗಡೆ ಮಾಡಿದ್ದು, ಇದರಲ್ಲಿ ಪನ್ನುನ್ ನ.16, 17ರಂದು ದಾಳಿ ಮಾಡುವ ಬಗ್ಗೆ ಎಚ್ಚರಿಕೆ ನೀಡಿದ್ದಾನೆ. ಕೆನಡಾದ ಬ್ರಾಂಪ್ಟನ್ ನಲ್ಲಿ ಈ ವಿಡಿಯೋ ರೆಕಾರ್ಡ್ ಮಾಡಲಾಗಿದ್ದು, ಈ ವಿಡಿಯೋದ ಮೂಲಕ ಹಿಂದೂ ಧಾರ್ಮಿಕ ಕ್ಷೇತ್ರಗಳ ವಿರುದ್ಧ ಹಿಂಸಾಚಾರ ಪ್ರಚೋದಿಸಲು ಮುಂದಾಗಿದ್ದಾರೆ ಎನ್ನಲಾಗುತ್ತಿದೆ. ವಿಡಿಯೋದಲ್ಲಿ ಇದೇ ವರ್ಷ ಜನವರಿಯಲ್ಲಿ ಪ್ರಧಾನಿ ಮೋದಿ ರಾಮಮಂದಿರದಲ್ಲಿ ಪ್ರಾರ್ಥನೆ ಸಲ್ಲಿಸುತ್ತಿರುವ ಫೋಟೋಗಳನ್ನು ಹಾಕಿದ್ದು, ಹಿಂಸಾತ್ಮಕ ಹಿಂದುತ್ವ ಸಿದ್ದಾಂತದ ಜನ್ಮಸ್ಥಳ ಅಯೋಧ್ಯೆಯ ಅಡಿಪಾಯವನ್ನು ನಾವು ಅಲ್ಲಾಡಿಸುತ್ತೇವೆ ಎಂದು ಬೆದರಿಕೆ ಹಾಕಿದ್ದಾನೆ. ಅಲ್ಲದೇ ಹಿಂದೂ ದೇವಾಲಯಗಳ ಮೇಲಿನ ಖಲಿಸ್ತಾನಿ ದಾಳಿಯಿಂದ ದೂರವಿರುವಂತೆ ಕೆನಡಾದ ಭಾರತೀಯರಿಗೆ ಎಚ್ಚರಿಕೆ ನೀಡಿದ್ದಾನೆ.