ಬೆಂಗಳೂರು : ಜಮೀರ್ ಪುತ್ರ ಝೈದ್ ಖಾನ್ ಅವರು ‘ಬನಾರಸ್’ ಸಿನಿಮಾ ಮೂಲಕ ಎಲ್ಲರ ಗಮನ ಸೆಳೆದರು. ಈಗ ಅವರು ಮುಂದಿನ ಚಿತ್ರದ ಕೆಲಸದಲ್ಲಿ ಬ್ಯುಸಿ ಇದ್ದಾರೆ. ಈ ಚಿತ್ರಕ್ಕೆ ‘ಕಲ್ಟ್’ ಎಂದು ಟೈಟಲ್ ಇಡಲಾಗಿದ್ದು, ಸಿನಿಮಾದ ಶೂಟಿಂಗ್ ನಡೆಯುತ್ತಿದೆ. ಈಗ ಚಿತ್ರತಂಡ ಎಡವೊಟ್ಟೊಂದನ್ನು ಮಾಡಿಕೊಂಡಿದ್ದು, ಇದಕ್ಕೆ ಸಂಬಂಧಿಸಿ ಕೇಸ್ ಕೂಡ ದಾಖಲಾಗಿದೆ. ಸದ್ಯ ಪೊಲೀಸರು ತಂಡಕ್ಕೆ ನೋಟಿಸ್ ನೀಡಿದ್ದಾರೆ.
ಚಿತ್ರತಂಡದವರು ಮಾಡಿದ ತಪ್ಪಿಗೆ ಡ್ರೋನ್ ಟೆಕ್ನಿಷಿಯನ್ ಆತ್ಮಹತ್ಯೆಗೆ ಯತ್ನಿಸಿದರು ಎಂದು ವರದಿ ಆಗಿದೆ. ‘ಕಲ್ಟ್’ ಸಿನಿಮಾದಲ್ಲಿ ಸಂತೋಷ್ ಎಂಬುವವರು ಡ್ರೋನ್ ಉಸ್ತುವಾರಿ ವಹಿಸಿಕೊಂಡಿದ್ದರು. ಇವರು ಈ ಮೊದಲು ‘ಮಾರ್ಟಿನ್’, ‘ಯುವ’ ಸಿನಿಮಾಗಳಲ್ಲಿ ಕೆಲಸ ಮಾಡಿದ ಅನುಭವ ಸಂತೋಷ್ಗೆ ಇದೆ. ನ.25ರಂದು ಚಿತ್ರದುರ್ಗದಲ್ಲಿ ಶೂಟಿಂಗ್ ನಡೆಯುತ್ತಿತ್ತು. ಒಂದು ದಿನಕ್ಕೆ 25 ಸಾವಿರ ರೂಪಾಯಿ ನಿಗದಿ ಮಾಡಿ ಅವರು ಶೂಟ್ ಮಾಡುತ್ತಿದ್ದರು.
ಶೂಟಿಂಗ್ ವೇಳೆ ವಿಂಡ್ ಫ್ಯಾನ್ಗೆ ಟಚ್ ಆಗಿ ಡ್ರೋನ್ ತುಂಡಾಗಿತ್ತು. ಇದಾದ ಬಳಿಕ ಸಂತೋಷ್ಗೆ ಚಿತ್ರತಂಡ ಕೊಂಚವೂ ನಷ್ಟ ತುಂಬಿ ಕೊಟ್ಟಿರಲಿಲ್ಲ. ಈ ಬಗ್ಗೆ ಅವರು ತಂಡದ ಬಳಿ ಕೇಳಿಕೊಂಡಿದ್ದರು. ಈ ವೇಳೆ ನಷ್ಟ ಪರಿಹಾರ ಮಾಡದೆ ಒಂದೂವರೆ ಲಕ್ಷ ರೂಪಾಯಿ ಬೆಲೆಯ ಮೆಮೊರಿ ಕಾರ್ಡ್ ಕಿತ್ತುಕೊಂಡಿರುವ ಆರೋಪವನ್ನು ಸಂತೋಷ್ ಮಾಡಿದ್ದಾರೆ.
ಇದರಿಂದ ಮನನೊಂದು ಸಂತೋಷ್ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎನ್ನಲಾಗಿದೆ. ಸದ್ಯ ಮಾಗಡಿ ರೋಡ್ ಠಾಣೆಗೆ ಸಂತೋಷ್ ಸಹೋದರಿ ದೂರು ನೀಡಿದ್ದಾರೆ. ಮಾಗಡಿ ರಸ್ತೆ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ಮಂಗಳವಾರ (ಡಿಸೆಂಬರ್ 3) ವಿಚಾರಣೆಗೆ ಬರುವಂತೆ ಚಿತ್ರತಂಡಕ್ಕೆ ಪೊಲೀಸರು ಸೂಚನೆ ನೀಡಿದ್ದಾರೆ. ವಿಚಾರಣೆ ವೇಳೆ ಘಟನೆ ಬಗ್ಗೆ ವಿವರವಾಗಿ ತಂಡದವರು ಮಾಹಿತಿ ಪಡೆಯಲಿದ್ದಾರೆ. ವಿಚಾರಣೆಯ ಬಳಿಕ ಪೊಲೀಸರು ಮುಂದಿನ ಕ್ರಮದ ಬಗ್ಗೆ ನಿರ್ಧಾರ ಮಾಡಲಿದ್ದಾರೆ.