2025ರ ಆರಂಭಿಕ ಪಂದ್ಯದಲ್ಲಿ ಸೋಲುವ ಮೂಲಕ ತನ್ನ ಅಭಿಯಾನವನ್ನು ಆರಂಭಿಸಿರುವ ಮುಂಬೈ ಹಾಗೂ ಗುಜರಾತ್ ತಂಡಗಳು ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಮುಖಾಮುಖಿಯಾಗಲಿವೆ. 5 ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ತನ್ ಮೊದಲ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ದ ಸೋತರೆ, ಗುಜರಾತ್ ಟೈಟನ್ಸ್ ಪಂಜಾಬ್ ಕಿಂಗ್ಸ್ ವಿರುದ್ದ ಸೋತಿದೆ. ಹೀಗಾಗಿ ಉಭಯ ತಂಡಗಳು ತಮ್ಮ ಹಿಂದಿನ ಪಂದ್ಯಗಳಲ್ಲಿ ಸೋಲನ್ನು ಕಂಡು ಮೊದಲ ಜಯದ ಹುಡುಕಾಟದಲ್ಲಿವೆ. ಮುಂಬೈ ಕಡೆ ನಾಯಕ ಹಾರ್ದಿಕ್ ಪಾಂಡ್ಯ ವಾಪಸ್ ಆಗಿದ್ದು ಅವರು ತಂಡವನ್ನು ಮುನ್ನಡೆಸಲಿದ್ದಾರೆ. ರೋಹಿತ್ ಶರ್ಮಾ, ವಿಲ್ ಜಾಕ್ಸ್, ಸೂರ್ಯ ಕುಮಾರ್ ಯಾದವ್, ತಿಲಕ್ ವರ್ಮಾರಂತಹ ಆಟಗಾರರನ್ನು ಹೊಂದಿರುವ ಮುಂಬೈಗೆ ಬ್ಯಾಟಿಂಗ್ಗಿಂತ ಬೌಲಿಂಗ್ ಹೆಚ್ಚು ಚಿಂತೆಗೀಡು ಮಾಡಿದೆ. ಜಸ್ಪೀತ್ ಬೂಮ್ರಾ ಅನುಪಸ್ಥಿತಿಯಲ್ಲಿ ಟ್ರೆಂಟ್ ಬೌಲ್ಟ್, ದೀಪಕ್ ಚಹರ್, ಮುಜಿಬ್ ರೆಹಮಾನ್, ವಿಘ್ನೇಶ್ ಪುತ್ತೂರ್ ತಮ್ಮ ಜವಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಬೇಕಿದೆ. ಇತ್ತ ಪಂಜಾಬ್ ಕಿಂಗ್ಸ್ ವಿರುದ್ದ ಗೆಲ್ಲುವ ಅಂಚಿನಲ್ಲಿ ಸೋಲುಂಡ ಗುಜರಾತ್ ಮುಂಬೈಗೆ ಶಾಕ್ ನೀಡುವ ಲೆಕ್ಕಾಚಾರದಲ್ಲಿದೆ. ನಾಯಕ ಶುಭಮನ್ ಗಿಲ್, ಜೋಸ್ ಬಟ್ಲರ್, ಸಾಯಿ ಸುದರ್ಶನ್, ಶಾರುಖ್ ಖಾನ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ರಬಾಡ, ಸಿರಾಜ್, ಪ್ರಸಿದ್ದ್ ಕೃಷ್ಣರಂತಹ ಆಟಗಾರಿದ್ದಾರೆ. ಟೂರ್ನಿಯಲ್ಲಿ ಉಭಯ ತಂಡಗಳು ಮೊದಲ ಗೆಲುವಿನ ನಿರೀಕ್ಷೆಯಲ್ಲಿದ್ದು ಎರಡು ತಂಡಗಳಿಂದ ಜಿದ್ದಾಜಿದ್ದಿನ ಹೋರಾಟ ಕಂಡುಬರಲಿದೆ.

ಪಿಚ್ ರಿಪೋರ್ಟ್
ಅಹಮದಾಬಾದ್ ಕ್ರೀಡಾಂಗಣದ ಪಿಚ್ ಬ್ಯಾಟಿಂಗ್ಗೆ ಸಹಾಯಕವಾಗಲಿದ್ದು ದೊಡ್ಡ ಮೊತ್ತ ದಾಖಲಾಗುವ ಸಾಧ್ಯತೆಯಿದೆ. ಇತ್ತೀಚೆಗೆ ನಡೆದ ಪಂಜಾಬ್ ಹಾಗೂ ಗುಜರಾತ್ ನಡುವಿನ ಪಂದ್ಯದಲ್ಲಿ ಒಟ್ಟು 475 ರನ್ಗಳು ಹರಿದುಬಂದಿದ್ದು ಇದಕ್ಕೆ ಉತ್ತಮ ಉದಾಹರಣೆಯಾಗಿದೆ.
ಅಭಿಷೇಕ್.ಎಸ್