
annamalai visits kukke subrahmanya temple karnataka
ಬಿಜೆಪಿ ತಮಿಳುನಾಡು ಘಟಕದ ಮಾಜಿ ಅಧ್ಯಕ್ಷ ಹಾಗೂ ಮಾಜಿ ಐಪಿಎಸ್ ಅಧಿಕಾರಿ ಕೆ.ಅಣ್ಣಾಮಲೈ ಅವರು ಇಂದು ತಮ್ಮ ಕುಟುಂಬಸಮೇತರಾಗಿ ನಾಡಿನ ಪ್ರಸಿದ್ಧ ಕ್ಷೇತ್ರ ಕುಕ್ಕೆ ಶ್ರೀ ಸುಬ್ರಹ್ಮಣ್ಯಕ್ಕೆ ಆಗಮಿಸಿ ದೇವರ ದರ್ಶನ ಪಡೆದರು.
ಅಣ್ಣಾಮಲೈ ಅವರು ಶ್ರೀ ಸಂಪುಟ ನರಸಿಂಹಸ್ವಾಮಿ ಸುಬ್ರಹ್ಮಣ್ಯ ಮಠದಲ್ಲಿ ಆಶ್ಲೇಷ ಬಲಿ ಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ಪತ್ನಿ, ಮಕ್ಕಳು ಹಾಗೂ ಇತರೆ ಕುಟುಂಬ ಸದಸ್ಯರು ಉಪಸ್ಥಿತರಿದ್ದರು. ಪೂಜೆ ಮುಗಿಸಿದ ನಂತರ ಶ್ರೀ ವಿದ್ಯಾಪ್ರಸನ್ನ ತೀರ್ಥ ಶ್ರೀಪಾದರನ್ನು ಭೇಟಿಯಾಗಿ ಆಶೀರ್ವಾದ ಪಡೆದರು.
ನಂತರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅಣ್ಣಾಮಲೈ, “ನಾನು ಕಳೆದ ಹತ್ತು ಹದಿನೈದು ವರ್ಷಗಳಿಂದ ಸ್ವಾಮೀಜಿಯನ್ನು ಭೇಟಿ ಮಾಡಿ ಮಾತುಕತೆ ನಡೆಸುತ್ತಿದ್ದೇನೆ. ಹಲವಾರು ವರ್ಷಗಳಿಂದ ಕ್ಷೇತ್ರಕ್ಕೆ ಬರುತ್ತಿದ್ದೇನೆ. ಆಶ್ಲೇಷ ನಕ್ಷತ್ರದ ಈ ಪುಣ್ಯ ದಿನದಂದು ತಮಿಳುನಾಡು, ಕರ್ನಾಟಕದ ಜನ ಹಾಗೂ ಇಡೀ ದೇಶದ ಜನರು ಸುಖ, ಶಾಂತಿ ನೆಮ್ಮದಿಯಾಗಿ ಇರಬೇಕು. ಎಲ್ಲರಿಗೂ ಒಳ್ಳೆಯದಾಗಬೇಕು ಎಂದು ಪ್ರಾರ್ಥನೆ ಮಾಡಿದ್ದೇನೆ” ಎಂದು ಹೇಳಿದರು.
ಇದು ಪರಶುರಾಮ ಸೃಷ್ಟಿಯ ಕ್ಷೇತ್ರವಾಗಿದ್ದು, ಸುಮಾರು 5000 ವರ್ಷಗಳ ಇತಿಹಾಸವಿದೆ. ಸಾವಿರಾರು ಭಕ್ತರು ನಂಬಿಕೆ ಮತ್ತು ಭಕ್ತಿಯಿಂದ ಇಲ್ಲಿ ಬಂದು ದೇವರಲ್ಲಿ ಶರಣಾಗುತ್ತಾರೆ. ಈ ಬಾರಿ ಕೂಡ ನಾನು ಸ್ವಾಮೀಜಿಗಳ ಆಶೀರ್ವಾದ ಪಡೆದು ಮನಸ್ಸಿಗೆ ನೆಮ್ಮದಿ ಕಂಡು ವಾಪಸಾಗುತ್ತಿದ್ದೇನೆ ಎಂದು ಹೇಳಿದರು.