Ashwaveega News 24×7 ಜನವರಿ 14 – ಬೀದರ್: ಕರ್ನಾಟಕದ ಬೀದರ್ ಜಿಲ್ಲೆಯಲ್ಲಿ ಗಾಳಿಪಟದ ದಾರ ಬೈಕ್ ಸವಾರನ ಕುತ್ತಿಗೆ ಸೀಳಿದ ಪರಿಣಾಮದಿಂದ 48 ವರ್ಷದ ಸಂಜುಕುಮಾರ್ ಹೊಸಮನಿ ಎಂಬುವವರು ದಾರುಣವಾಗಿ ಸಾವನ್ನಪ್ಪಿದ್ದಾರೆ. ರಕ್ತದ ಮಡುವಿನಲ್ಲಿದ್ದ ಅವರು ರಕ್ಷಣೆಗಾಗಿ ಮಗಳಿಗೆ ಫೋನ್ ಮಾಡಲು ಯತ್ನಿಸುತ್ತಿರುವ ವಿಡಿಯೋ ವೈರಲ್ ಆಗಿದ್ದು, ಮನಕಲಕುವಂತಿದೆ.
ಮಕರ ಸಂಕ್ರಾಂತಿ ನಿಮಿತ್ತ ಗಾಳಿಪಟ ಹಾರಿಸಿದ ವೇಳೆ ನಿಷೇಧಿತ ಚೀನಿ ಮಾಂಜಾ ದಾರಕ್ಕೆ ಸಿಲುಕಿ ವ್ಯಕ್ತಿಯೊಬ್ಬ ನರಳಾಡಿ ದಾರುಣವಾಗಿ ಸಾವನ್ನಪ್ಪಿದ ಘಟನೆ ಬೀದರ್ ಜಿಲ್ಲೆಯ ಚಿಟಗುಪ್ಪ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 65ರ ನಿರ್ಣಾ ಕ್ರಾಸ್ ಬಳಿ ಸಂಭವಿಸಿದೆ.
ಮಗಳನ್ನು ಕರೆದುಕೊಂಡು ಬರಲು ವ್ಯಕ್ತಿ ಬೈಕ್ ಮೇಲೆ ಹೋಗುತ್ತಿದ್ದಾಗ ಚೀನಿ ಮಾಂಜಾ ದಾರಕ್ಕೆ ಕತ್ತು ಸಿಲುಕಿ ಸ್ಥಳದಲ್ಲೇ ವ್ಯಕ್ತಿ ದುರಂತ ಅಂತ್ಯ ಕಂಡಿದ್ದಾರೆ. ಬೈಕ್ ಮೇಲೆ ವೇಗವಾಗಿ ಹೋಗುತ್ತಿದ್ದಾಗ ಕಣ್ಣಿಗೆ ಕಾಣಿಸದ ಚೀನಿ ಮಂಜಾ ದಾರ ಕುತ್ತಿಗೆಗೆ ಸಿಲುಕಿ ವ್ಯಕ್ತಿ ಸಾವನ್ನಪ್ಪಿದ್ದಾರೆ . ಸ್ಥಳಕ್ಕೆ ಆಂಬ್ಯುಲೆನ್ಸ್ ಬರುವುದು ವಿಳಂಬವಾಗಿದ್ದರಿಂದ ಪ್ರಾಣ ಉಳಿಸಿಕೊಳ್ಳಲಾಗಲಿಲ್ಲ ಎಂದು ಸಂಬಂಧಿಕರು ಆರೋಪಿಸಿದ್ದಾರೆ.
ಬೀದರ್ ತಾಲ್ಲೂಕಿನ ಬೊಂಬಳಗಿ ಗ್ರಾಮದ 48 ವರ್ಷದ ಸಂಜುಕುಮಾರ್ ಸಾವನ್ನಪ್ಪಿದ ದುರ್ದೈವಿ. ಸಂಕ್ರಾಂತಿಯಂದೇ ಚೀನಿ ದಾರದಿಂದ ವ್ಯಕ್ತಿ ಮೃತಪಟ್ಟಿದ್ದು, ಮನ್ನಾಏಖ್ಖೇಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಸ್ತೆಗೆ ಅಡ್ಡಲಾಗಿ ಬಿದ್ದಿದ್ದ ಗಾಳಿಪಟದ ದಾರದಿಂದ ಆಳವಾದ ಗಾಯವಾಗಿ, ಹೊಸಮನಿ ಅವರಿಗೆ ರಕ್ತಸ್ರಾವವಾಯಿತು. ಬೈಕ್ನಿಂದ ಕುಸಿದು ಬಿದ್ದ ಅವರು ಹೇಗೋ ತಮ್ಮ ಮಗಳ ಸಂಖ್ಯೆಗೆ ಕರೆ ಮಾಡಿದ್ದಾರೆ. ರಕ್ತದ ಮಡುವಿನಲ್ಲಿದ್ದ ಹೊಸಮನಿ ತಮ್ಮ ಮಗಳ ಸಂಖ್ಯೆಗೆ ಕರೆ ಮಾಡಲು ಪ್ರಯತ್ನಿಸುತ್ತಿರುವುದನ್ನು ಮನಕಲಕುವ ವೀಡಿಯೊ ತೋರಿಸುತ್ತದೆ.
ಈಗಾಗಲೇ ಈ ಬಗ್ಗೆ ಜಾಗೃತಿ ಮೂಡಿಸಿದ್ದು, ಚೀನಿ ಮಾಂಜಾ ದಾರವನ್ನು ಮಾರಾಟ ಮಾಡದಂತೆ ಎಲ್ಲರಿಗೂ ಎಚ್ಚರಿಕೆ ನೀಡಲಾಗಿದೆ. ಆದರೂ, ಕೆಲವು ಕಡೆ ಈ ನಿಷೇಧಿತ ಚೀನಿ ಮಾಂಜಾ ದಾರ ಮಾರಾಟ ಮಾಡಲಾಗುತ್ತಿದೆ.
