Ashwaveega News 24×7 ಜನವರಿ 18 – ನಟ ಕೋಮಲ್ ಕುಮಾರ್ ಹೊಸ ಸಿನಿಮಾ ಮೂಲಕ ಮತ್ತೆ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿದ್ದಾರೆ. ಸಿನಿಮಾ ಆಯ್ಕೆ ವಿಷಯದಲ್ಲಿ ಚ್ಯೂಸಿ ಆಗಿರುವ ಕೋಮಲ್, ಬಂದ ಎಲ್ಲ ಕಥೆಗಳಿಗೆ ಸಹಿ ಹಾಕದೇ, ವಿಭಿನ್ನತೆ ಇರುವ ಕಥೆಗಳಿಗೆ ಮಾತ್ರ ಒಪ್ಪಿಗೆ ನೀಡುತ್ತಿದ್ದಾರೆ. ಅದೇ ಸಾಲಿನಲ್ಲಿ ಈಗ ಘೋಷಣೆಯಾಗಿರುವ ಚಿತ್ರವೇ ‘ತೆನಾಲಿ ಡಿ LLB’.
ಟೈಟಲ್ ಹೇಳುವಂತೆಯೇ ಈ ಸಿನಿಮಾದಲ್ಲಿ ಕೋಮಲ್ ಕುಮಾರ್ ಲಾಯರ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಬಿಡುಗಡೆಯಾಗಿರುವ ಪೋಸ್ಟರ್ನಲ್ಲಿ ಕರಿ ಕೋಟು ಧರಿಸಿದ ಲಾಯರ್ ಲುಕ್ನಲ್ಲಿ ಕೋಮಲ್ ಮಿಂಚಿದ್ದಾರೆ. ಇದು ಅವರ ಅಭಿಮಾನಿಗಳ ಕುತೂಹಲವನ್ನು ಇನ್ನಷ್ಟು ಹೆಚ್ಚಿಸಿದೆ.

‘ತೆನಾಲಿ ಡಿ LLB’ ಚಿತ್ರವನ್ನು ನಿರ್ದೇಶಿಸುತ್ತಿರುವವರು ಸಿದ್ದು. ಈ ಹಿಂದೆ ವಿಜಯರಾಘವೇಂದ್ರ ನಟನೆಯ ಮರೀಚಿ ಸಿನಿಮಾವನ್ನು ನಿರ್ದೇಶಿಸಿ ವಿಮರ್ಶಾತ್ಮಕ ಮೆಚ್ಚುಗೆ ಪಡೆದಿದ್ದ ಸಿದ್ದ್ರುವ್ ಸಿದ್ದು, ಈ ಬಾರಿ ಕೋಮಲ್ಗಾಗಿ ವಿಭಿನ್ನ ಹಾಗೂ ಇಂದಿನ ಕಾಲಘಟ್ಟಕ್ಕೆ ಹೊಂದುವ ಕಥೆಯನ್ನು ರಚಿಸಿದ್ದಾರೆ. ಈ ಚಿತ್ರಕ್ಕೆ ಕಥೆ ಮತ್ತು ಚಿತ್ರಕಥೆಯನ್ನೂ ಅವರೇ ಬರೆದಿದ್ದಾರೆ.
ಸದ್ಯ ಪೋಸ್ಟರ್ ಮತ್ತು ಪ್ರೊಮೋಷನಲ್ ಕಂಟೆಂಟ್ ಬಿಡುಗಡೆ ಮಾಡಿರುವ ಚಿತ್ರತಂಡ, ಮೇ ತಿಂಗಳಲ್ಲಿ ಚಿತ್ರೀಕರಣ ಆರಂಭಿಸುವ ಯೋಜನೆಯಲ್ಲಿ ಇದೆ. ವಿಶೇಷವೆಂದರೆ, ಇದೇ ಮೊದಲ ಬಾರಿಗೆ ತೆರೆ ಮೇಲೆ ಲಾಯರ್ ಪಾತ್ರದಲ್ಲಿ ಅಭಿನಯಿಸುತ್ತಿರುವ ಕೋಮಲ್, ನಿಜ ಜೀವನದಲ್ಲಿಯೂ ಎಲ್ಎಲ್ಬಿ ಓದಿರುವುದು ಚಿತ್ರದ ಮೇಲೆ ಇನ್ನಷ್ಟು ಕುತೂಹಲ ಮೂಡಿಸಿದೆ..
ಈ ಸಿನಿಮಾವನ್ನು ಸಿದ್ಧ್ರುವ್ ಸಿದ್ದು, ಸಂತೋಷ್ ಮಾಯಪ್ಪ, ಪ್ರದೀಪ್ ಕುಮಾರ್ ಮಹಾಲಿಂಗಯ್ಯ ಮತ್ತು ರೇಣುಕಾ ಪ್ರಸಾದ್ ನಿರ್ಮಿಸುತ್ತಿದ್ದಾರೆ. ಚಿತ್ರಕ್ಕೆ ರಿತ್ವಿಕ್ ಮುರಳಿ ಧರನ್ ಸಂಗೀತ ನಿರ್ದೇಶನ ಮಾಡಿದ್ದಾರೆ ….ಪೋಸ್ಟರ್ ಬಿಡುಗಡೆ ಮೂಲಕ ಗಮನ ಸೆಳೆದಿರುವ ‘ತೆನಾಲಿ ಡಿ LLB’ ಚಿತ್ರತಂಡ, ಮುಂದಿನ ದಿನಗಳಲ್ಲಿ ಇನ್ನಷ್ಟು ಮಾಹಿತಿ ಬಹಿರಂಗಪಡಿಸುವುದಾಗಿ ತಿಳಿಸಿದೆ.
