Ashwaveega News 24×7 ಮಾರ್ಚ್ 30 – 2026 : ಬೆಂಗಳೂರು / ಹೈದರಾಬಾದ್: ಖ್ಯಾತ ನಟ ಹಾಗೂ ಸಮಾಜಸೇವಕ ಪ್ರಕಾಶ್ ರೈ ಅವರ ಕುಟುಂಬದಲ್ಲಿ ದುಃಖದ ವಾತಾವರಣ ನಿರ್ಮಾಣವಾಗಿದೆ. ಅವರ ತಾಯಿ ಸುವರ್ಣಲತಾ ಅವರು ಇಂದು ಬೆಳಿಗ್ಗೆ ಹೈದರಾಬಾದ್ನ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ.
ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಸುವರ್ಣಲತಾ ಅವರಿಗೆ 86 ವರ್ಷ ವಯಸ್ಸಾಗಿತ್ತು. ಅವರು ಮೂಲತಃ ರೋಮನ್ ಕ್ಯಾಥೋಲಿಕ್ ಕುಟುಂಬಕ್ಕೆ ಸೇರಿದವರಾಗಿದ್ದು, ವೃತ್ತಿಯಲ್ಲಿ ನರ್ಸ್ ಆಗಿ ಸೇವೆ ಸಲ್ಲಿಸಿದ್ದರು.
ಮೃತದೇಹವನ್ನು ಇಂದು ಮಧ್ಯಾಹ್ನ ಬೆಂಗಳೂರಿಗೆ ತರಲಾಗುತ್ತಿದ್ದು, ಸಂಜೆ ವೇಳೆಗೆ ಅಂತ್ಯಕ್ರಿಯೆ ನೆರವೇರಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ. ಸುವರ್ಣಲತಾ ಅವರಿಗೆ ನಟ ಪ್ರಕಾಶ್ ರೈ ಸೇರಿದಂತೆ ಇಬ್ಬರು ಮಕ್ಕಳು ಇದ್ದಾರೆ.
ಬಹುಭಾಷಾ ನಟನಾಗಿ ಹಾಗೂ ಸಮಾಜಮುಖಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಪ್ರಕಾಶ್ ರೈ ಅವರಿಗೆ ತಾಯಿಯ ಅಗಲಿಕೆ ದೊಡ್ಡ ನಷ್ಟವಾಗಿದ್ದು, ಅಭಿಮಾನಿಗಳು ಮತ್ತು ಚಿತ್ರರಂಗದ ಗಣ್ಯರು ಸಂತಾಪ ಸೂಚಿಸುತ್ತಿದ್ದಾರೆ.
