Ashwaveega News 24×7 ಜನವರಿ 19 – ಬೆಂಗಳೂರು: ನಟಿ ಕಾರುಣ್ಯ ರಾಮ್ ಅವರು ತಮ್ಮ ಸಹೋದರಿಯ ವಿರುದ್ಧವೇ ದೂರು ನೀಡಿರುವ ಪ್ರಕರಣ ಇದೀಗ ಸೈಬರ್ ಕ್ರೈಂ ವಿಭಾಗದ ಗಮನ ಸೆಳೆದಿದೆ. ಕಾರುಣ್ಯ ರಾಮ್ ಕುರಿತಾಗಿ ಸಾಮಾಜಿಕ ಜಾಲತಾಣದಲ್ಲಿ ಕಾಮೆಂಟ್ ಮಾಡಿದ ಹಿನ್ನೆಲೆ, ಪ್ರತಿಭಾ ಎಂಬುವವರನ್ನು ಸಿಸಿಬಿ ಸೈಬರ್ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ.

ಈ ಸಂಬಂಧ ಇಂದು ಬೆಳಗ್ಗೆ ಪ್ರತಿಭಾ ಅವರು ಪೊಲೀಸ್ ಕಮಿಷನರ್ ಕಚೇರಿಗೆ ಹಾಜರಾಗಿ ವಿಚಾರಣೆಗೆ ಒಳಗಾಗಿದ್ದಾರೆ. ಸೈಬರ್ ಕಾನೂನು ಉಲ್ಲಂಘನೆ ಶಂಕೆಯ ಹಿನ್ನೆಲೆಯಲ್ಲಿ ಸಿಸಿಬಿ ಸೈಬರ್ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿ ಇನ್ನೂ ಅಧಿಕೃತವಾಗಿ FIR ದಾಖಲಾಗಿಲ್ಲ. ಆದರೆ, NCR ದಾಖಲಿಸಿ ಮುಂದಿನ ತನಿಖೆಗೆ ಸಿಸಿಬಿ ಸೈಬರ್ ಪೊಲೀಸರು ಮುಂದಾಗಿದ್ದಾರೆ. ವಿಚಾರಣೆಗೆ ಹಾಜರಾದ ಪ್ರತಿಭಾ ಅವರ ಜೊತೆಗೆ ಕಪಿಲ್ ಎಂಬ ವ್ಯಕ್ತಿಯೂ ಹಾಜರಾಗಿದ್ದರು. ಕಪಿಲ್ ಅವರು ಕಾರುಣ್ಯ ರಾಮ್ ಅವರ ಸಹೋದರಿ ಸಮೃದ್ಧಿಗೆ ಹಣ ನೀಡಿದ್ದುದಾಗಿ ತಿಳಿದುಬಂದಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂದಿನ ಕ್ರಮ ತನಿಖೆಯ ಪ್ರಗತಿಯ ಆಧಾರದಲ್ಲಿ ನಿರ್ಧಾರವಾಗಲಿದೆ ಎಂದು ಸಿಸಿಬಿ ಮೂಲಗಳು ತಿಳಿಸಿವೆ.
