Ashwaveega News 24×7 ಫೆಬ್ರವರಿ 07 -2026 – ಮುಂಬೈ : ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರ ವಿಮಾನ ಅಪಘಾತದ ಸಾವು ರಾಜ್ಯ ರಾಜಕಾರಣದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಈ ಸಾವು ಆಕಸ್ಮಿಕವೇ ಅಥವಾ ಇದರ ಹಿಂದೆ ಷಡ್ಯಂತ್ರವಿದೆಯೇ ಎಂಬ ಪ್ರಶ್ನೆಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ.
ಎನ್ಸಿಪಿ ಬಣಗಳ ವಿಲೀನದ ಮಾತುಕತೆಗಳು ನಡೆಯುತ್ತಿದ್ದ ಸಮಯದಲ್ಲೇ ಈ ದುರ್ಘಟನೆ ಸಂಭವಿಸಿರುವುದರಿಂದ, ‘ವಿಲೀನ ಪ್ರಕ್ರಿಯೆ ತಡೆಯಲು ಕಾಣದ ಕೈ ಕಾರ್ಯನಿರ್ವಹಿಸಿತೇ ?’ ಎಂಬ ಅನುಮಾನಗಳು ಮತ್ತಷ್ಟು ಬಲ ಪಡೆದಿವೆ. ಈ ಬಗ್ಗೆ ಅಜಿತ್ ಪವಾರ್ ಅವರ ಸಂಬಂಧಿ ಹಾಗೂ ಎನ್ಸಿಪಿ–ಶರದ್ ಬಣದ ಶಾಸಕ ರೋಹಿತ್ ಪವಾರ್ ಸ್ಫೋಟಕ ಹೇಳಿಕೆ ನೀಡಿದ್ದಾರೆ.
‘ಈ ವಿಮಾನ ಅಪಘಾತ ಪ್ರತಿಯೊಬ್ಬರ ಮನಸ್ಸಿನಲ್ಲಿಯೂ ಪ್ರಶ್ನೆ ಹುಟ್ಟುಹಾಕಿದೆ. ಏಕೆ ಈ ದುರಂತ ಸಂಭವಿಸಿತು ? ಹೇಗೆ ಸಂಭವಿಸಿರಬಹುದು ? ಈ ಕುರಿತು ನನಗೆ ಸಾಕಷ್ಟು ಅನುಮಾನಗಳಿವೆ’ ಎಂದು ರೋಹಿತ್ ಪವಾರ್ ಹೇಳಿದ್ದಾರೆ. ಈ ಎಲ್ಲಾ ಅನುಮಾನಗಳ ಬಗ್ಗೆ ಫೆಬ್ರವರಿ 10 ರಂದು ವಿವರವಾಗಿ ಮಾತನಾಡುವುದಾಗಿ ಅವರು ತಿಳಿಸಿದ್ದಾರೆ.
ರಾಜಕೀಯ ವಲಯದಲ್ಲಿ ಅಜಿತ್ ಪವಾರ್ ಎನ್ಸಿಪಿಯ ಎರಡು ಬಣಗಳು ಒಂದಾಗಬೇಕೆಂದು ಬಯಸುತ್ತಿದ್ದರು ಹಾಗೂ ವಿಲೀನಕ್ಕಾಗಿ ಸಕ್ರಿಯ ಪ್ರಯತ್ನ ನಡೆಸುತ್ತಿದ್ದರು ಎಂಬ ಮಾತುಗಳು ಕೇಳಿಬರುತ್ತಿವೆ. ಅಷ್ಟರಲ್ಲೇ ಈ ದುರಂತ ಸಂಭವಿಸಿರುವುದು ಹಲವು ಸಂಶಯಗಳಿಗೆ ಕಾರಣವಾಗಿದೆ.
ಜನವರಿ 28 ರಂದು ಬಾರಾಮತಿ ಏರ್ ಸ್ಟ್ರಿಪ್ನಲ್ಲಿ ಅಜಿತ್ ಪವಾರ್ ಪ್ರಯಾಣಿಸುತ್ತಿದ್ದ ವಿಮಾನ ಪತನಗೊಂಡಿತ್ತು. ಅಪಘಾತದ ನಿಖರ ಕಾರಣಗಳ ಕುರಿತು ತನಿಖೆ ಮುಂದುವರಿದಿದ್ದು, ಅಧಿಕೃತ ವರದಿ ಇನ್ನಷ್ಟೇ ಹೊರಬರಬೇಕಿದೆ.
ಈ ನಡುವೆ ರಾಜಕೀಯ ನಾಯಕರು ಹಾಗೂ ಸಾರ್ವಜನಿಕರು ಸತ್ಯಾಂಶ ಬಹಿರಂಗವಾಗಬೇಕೆಂದು ಒತ್ತಾಯಿಸುತ್ತಿದ್ದು, ಮುಂದಿನ ದಿನಗಳಲ್ಲಿ ಈ ಪ್ರಕರಣ ಮತ್ತಷ್ಟು ರಾಜಕೀಯ ತಾಪಮಾನ ಹೆಚ್ಚಿಸುವ ಸಾಧ್ಯತೆ ಇದೆ.
