Ashwaveega News 24×7 ಜನವರಿ 15 – ಪರಿಶಿಷ್ಟ ಜಾತಿಗಳಿಗೆ ಒಳ ಮೀಸಲಾತಿ ನೀಡುವ ಮಸೂದೆಗೆ ಸ್ಪಷನೆ ಕೋರಿ ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್ ವಾಪಸ್ ಕಳುಹಿಸಿದ್ದಾರೆ. ಇದರಿಂದಾಗಿ ವಿವಿಧ ರಾಜ್ಯ ಸರ್ಕಾರಿ ಇಲಾಖೆಗಳಲ್ಲಿನ ಖಾಲಿ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯು ಮತ್ತಷ್ಟು ವಿಳಂಬವಾಗುವ ಸಾಧ್ಯತೆಗಳಿವೆ.
ಡಿಸೆಂಬರ್ನಲ್ಲಿ ನಡೆದ ಬೆಳಗಾವಿ ಅಧಿವೇಶನದಲ್ಲಿ ಸರ್ಕಾರ ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ಮಸೂದೆಯನ್ನು ಅಂಗೀಕರಿಸಿತು. ಮೀಸಲಾತಿ ಸೌಲಭ್ಯಗಳ ನ್ಯಾಯಯುತ ಮತ್ತು ಸಮಾನ ವಿತರಣೆಯನ್ನು ಖಚಿತಪಡಿಸಿಕೊಳ್ಳಲು ಪರಿಶಿಷ್ಟ ಜಾತಿಗಳ ವಿವಿಧ ಉಪ ಪಂಗಡಗಳ ನಡುವೆ ಪರಿಶಿಷ್ಟ ಜಾತಿಗಳಿಗೆ ನಿಗದಿಪಡಿಸಿದ ಶೇ ಮೀಸಲಾತಿ ಕೋಟಾವನ್ನು ವಿಭಜಿಸಲಾಗಿತ್ತು. ಈ ಮಸೂದೆಗೆ ಅಂಕಿತ ಕೋರಿ ಕಳೆದ ವಾರ ರಾಜ್ಯಪಾಲರಿಗೆ ಕಳುಹಿಸಲಾಗಿತ್ತು. ಈ ಮಸೂದೆಯನ್ನು ರಾಜ್ಯಪಾಲರು ಸ್ಪಷ್ಟೀಕರಣ ನೀಡುವಂತೆ ಕೇಳಿ ವಾಪಸ್ ಕಳುಹಿಸಿದ್ದು, ಇದು ಉದ್ಯೋಗಾಕಾಂಕ್ಷಿಗಳಲ್ಲಿ ನಿರಾಸೆ ಮೂಡಿಸಿದೆ.
ಎಸ್ಸಿ ಒಳಮೀಸಲಾತಿ ಕುರಿತು ಆಯೋಗ 2024ರ ಆಗಸ್ಟ್ 4ರಂದು ವರದಿ ಮಂಡಿಸಿದ್ದು, ಸರ್ಕಾರ ಕೆಲವು ಮಾರ್ಪಾಡುಗಳೊಂದಿಗೆ ಅದನ್ನು ಸ್ವೀಕರಿಸಿತ್ತು. 2025ರ ಅಕ್ಟೋಬರ್ನಲ್ಲಿsc ಒಳಮೀಸಲಾತಿ ಕೋಟಾವನ್ನು ಕೂಡಾ ಸೂಚಿಸಿತ್ತು. ಆದರೆ, ಇದುವರೆಗೂ ಸರ್ಕಾರ ಎಸ್ಸಿಗಳಲ್ಲಿ ವರ್ಗಗಳನ್ನು ಗುರುತಿಸಲು ಜಾತಿ ಪ್ರಮಾಣಪತ್ರಗಳನ್ನು ನೀಡುವ ಮಾರ್ಗಸೂಚಿಗಳನ್ನು ಅದು ಹೊರಡಿಸಿಲ್ಲ. ಈ ನಡುವೆ ಒಳಮೀಸಲಾತಿ ಸೂಚಿಸುವ ಆದೇಶಕ್ಕೆ ಕಾನೂನು ಬದ್ಧತೆ ನೀಡುವ ಮಸೂದೆಯನ್ನು ಅಂಗೀಕರಿಸಿತ್ತು. ಇದೀಗ ರಾಜ್ಯಪಾಲರು ಹೆಚ್ಚಿನ ಸ್ಪಷ್ಟೀಕರಣಗಳನ್ನು ಕೋರಿ ಮಸೂದೆಯನ್ನು ಹಿಂದಿರುಗಿಸಿರುವುದರಿಂದ, ನೇಮಕಾತಿಗಳು ಮತ್ತಷ್ಟು ವಿಳಂಬವಾಗುತ್ತವೆ.
ಸರ್ಕಾರದಲ್ಲಿ ಅತಿ ಹೆಚ್ಚು ಉದ್ಯೋಗ ನೇಮಕಾತಿ ನಡೆಸದಿರುವ ರಾಜ್ಯಗಳಲ್ಲಿ ಕರ್ನಾಟಕವೂ ಒಂದಾಗಿದೆ. ಚಳಿಗಾಲದ ಅಧಿವೇಶನದಲ್ಲಿ ಸರ್ಕಾರ ನೀಡಿದ ಅಂಕಿ ಅಂಶದ ಪ್ರಕಾರ ರಾಜ್ಯದ 43 ಇಲಾಖೆಯ 2 ಲಕ್ಷ 73 ಸಾವಿರ ಸರ್ಕಾರಿ ಉದ್ಯೋಗಗಳು ಖಾಲಿ ಇದ್ದು, ಶಿಕ್ಷಣ ಇಲಾಖೆಯಲ್ಲಿ 70,000 ಹಾಗೂ ಆರೋಗ್ಯ ಇಲಾಖೆಯಲ್ಲಿ 35,000 ಹಾಗೂ ಗೃಹ ಇಲಾಖೆಯಲ್ಲಿ 23,500 ಹುದ್ದೆಗಳು ಖಾಲಿ ಇವೆ.
