Ashwaveega News 24×7 ಮಾರ್ಚ್ 18– 2026 : ಬೆಂಗಳೂರು : ಸಾಮಾಜಿಕ ಜಾಲತಾಣಗಳಲ್ಲಿ ಲೈಕ್ಸ್ ಮತ್ತು ವ್ಯೂಸ್ ಗಳಿಸಲು ಕೆಲವರು ಎಂತಹ ಅತಿರೇಕಕ್ಕೂ ಹೋಗುತ್ತಿರುವ ಘಟನೆಗಳು ದಿನೇ ದಿನೇ ಹೆಚ್ಚಾಗುತ್ತಿವೆ. ಅದಕ್ಕೆ ತಾಜಾ ಉದಾಹರಣೆಯಾಗಿ ಬೆಂಗಳೂರಿನಲ್ಲಿ ನಡೆದ ಅಮಾನುಷ ಘಟನೆ ಬೆಳಕಿಗೆ ಬಂದಿದೆ.
ನಗರದ ವೈಯಾಲಿಕಾವಲ್ ಠಾಣೆ ವ್ಯಾಪ್ತಿಯಲ್ಲಿ ಮಹಿಳೆ, ಆಕೆಯ ಪತಿ, ಅತ್ತೆ ಮತ್ತು ಮೈದುನ ಸೇರಿಕೊಂಡು ಜೀವಂತ ವ್ಯಕ್ತಿಯನ್ನೇ ಚೀಲದಲ್ಲಿ ಕಟ್ಟಿಹಾಕಿ ‘ಕೊರಿಯರ್’ ಮಾಡಲು ಮುಂದಾಗಿರುವ ಘಟನೆ ನಡೆದಿದೆ. ಆ ವ್ಯಕ್ತಿ ಯಾರೋ ಅಲ್ಲ, ಮಹಿಳೆಯ ತಂದೆಯೇ ಆಗಿರುವುದು ಮತ್ತಷ್ಟು ಆಘಾತಕಾರಿಯಾಗಿದೆ.
ಪಾರ್ಸೆಲ್ ಗಾತ್ರ ಅಸಾಮಾನ್ಯವಾಗಿ ದೊಡ್ಡದಾಗಿದ್ದ ಕಾರಣ ಅನುಮಾನಗೊಂಡ ಕೊರಿಯರ್ ಸಿಬ್ಬಂದಿ, ಅದರೊಳಗೆ ಏನಿದೆ ಎಂದು ಪ್ರಶ್ನಿಸಿದ್ದಾರೆ. ಬಳಿಕ ಚೀಲ ತೆರೆಯುತ್ತಿದ್ದಂತೆ ಸಿಬ್ಬಂದಿ ಶಾಕ್ ಆಗಿದ್ದು, ಅದರೊಳಗೆ ಮಹಿಳೆಯ ತಂದೆಯನ್ನು ಕುಳ್ಳಿರಿಸಿದ ಸ್ಥಿತಿಯಲ್ಲಿ ಕಂಡುಬಂದಿದ್ದಾರೆ.
ಈ ಬಗ್ಗೆ ಪ್ರಶ್ನಿಸಿದಾಗ ಕುಟುಂಬಸ್ಥರು ನೀಡಿದ ಉತ್ತರ ಕೇಳಿ ಸಿಬ್ಬಂದಿ ಬೆಚ್ಚಿಬಿದ್ದಿದ್ದಾರೆ. ಯುಗಾದಿ ಹಬ್ಬದ ಸಮಯದಲ್ಲಿ ಬಸ್ ಟಿಕೆಟ್ ಸಿಗುತ್ತಿಲ್ಲ ಎಂಬ ಕಾರಣ ನೀಡಿ, ಪ್ರಯಾಣಕ್ಕೆ ‘ಕೊರಿಯರ್’ ಮಾಡುವ ಯೋಚನೆ ಮಾಡಿದ್ದಾಗಿ ಹೇಳಿದ್ದಾರೆ. ಜೊತೆಗೆ, ಇದು ಕೇವಲ ಪ್ರಾಂಕ್ ವಿಡಿಯೋ ಮಾಡಲು ಮಾಡಿದ ಕೃತ್ಯ ಎಂದು ಒಪ್ಪಿಕೊಂಡಿದ್ದಾರೆ.
ತಕ್ಷಣವೇ ಕೊರಿಯರ್ ಸಿಬ್ಬಂದಿ ವೈಯಾಲಿಕಾವಲ್ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಸ್ಥಳಕ್ಕೆ ಆಗಮಿಸಿ ಕುಟುಂಬಸ್ಥರನ್ನು ವಿಚಾರಣೆ ನಡೆಸಿದರು . ನಂತರ ಬೇಜವಾಬ್ದಾರಿ ವರ್ತನೆಗೆ ಕುಟುಂಬದಿಂದ ಕ್ಷಮೆಯಾಚನೆ ಮಾಡಿಸಿಕೊಂಡು , ವಿಡಿಯೋ ರೆಕಾರ್ಡ್ ಮಾಡಿಕೊಂಡು ವಾರ್ನಿಂಗ್ ನೀಡಿ ಬಿಡುಗಡೆ ಮಾಡಿದ್ದಾರೆ.
ಈ ಘಟನೆ ಸಾಮಾಜಿಕ ಜಾಲತಾಣದ ಹುಚ್ಚಾಟ ಎಷ್ಟರ ಮಟ್ಟಿಗೆ ಹೋಗಿದೆ ಎಂಬುದಕ್ಕೆ ಸ್ಪಷ್ಟ ಉದಾಹರಣೆಯಾಗಿದೆ …
