Ashwaveega News 24×7 ಜನವರಿ 12 – ಚಿಕ್ಕಮಗಳೂರು: ಜಿಲ್ಲೆಯ ಮೂಡಿಗೆರೆ ಕ್ಷೇತ್ರದ ಕಾಂಗ್ರೆಸ್ ಶಾಸಕಿ ನಯನಾ ಮೋಟಮ್ಮ ವಿರುದ್ಧ ಇನ್ಸ್ಟಾಗ್ರಾಂನಲ್ಲಿ ಅಶ್ಲೀಲ ಮತ್ತು ಅವಮಾನಕಾರಿ ಕಾಮೆಂಟ್ಗಳನ್ನು ಮಾಡಿದ್ದ ಪ್ರಕರಣದಲ್ಲಿ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ರಾಮನಗರ ಮೂಲದ ಯಕ್ಷಿತ್ ರಾಜ್ ಎಂಬ ಯುವಕನನ್ನು ಮೂಡಿಗೆರೆ ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಶಾಸಕಿ ನಯನಾ ಮೋಟಮ್ಮ ಅವರಿಗೆ ಇನ್ಸ್ಟಾಗ್ರಾಂನಲ್ಲಿ ಎರಡು ಅಧಿಕೃತ ಖಾತೆಗಳಿವೆ. ಒಂದು ಖಾತೆಯನ್ನು ವೈಯಕ್ತಿಕ ವಿಚಾರಗಳನ್ನು ಹಂಚಿಕೊಳ್ಳಲು ಮತ್ತು ಮತ್ತೊಂದನ್ನು ರಾಜಕೀಯ ವಿಚಾರಗಳಿಗೆ ಬಳಸುತ್ತಿದ್ದರು. ವೈಯಕ್ತಿಕ ಖಾತೆಯಲ್ಲಿ ಖಾಸಗಿ ಪ್ರವಾಸ ಮತ್ತು ವೈಯಕ್ತಿಕ ಕ್ಷಣಗಳನ್ನು ಹಂಚಿಕೊಳ್ಳುತ್ತಿದ್ದ ವೇಳೆ, ಅವರ ಬಟ್ಟೆ ಕುರಿತು ಕಿಡಿಗೇಡಿಗಳು ಅಶ್ಲೀಲ ಕಾಮೆಂಟ್ಗಳನ್ನು ಮಾಡಿದ್ದರು.
ಈ ಕುರಿತು ಶಾಸಕಿ ಅವರ ಪಿಎ ಸಂಸುದ್ದೀನ್ ಅವರು ಕಳೆದ ಅಕ್ಟೋಬರ್ ತಿಂಗಳಲ್ಲೇ ಮೂಡಿಗೆರೆ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದರು. ಆರೋಪಿಯು ನಿರಂತರವಾಗಿ ಬಟ್ಟೆ ವಿಚಾರವನ್ನು ನೆಪ ಮಾಡಿಕೊಂಡು ಶಾಸಕಿ ಅವರನ್ನು ಸಾಮಾಜಿಕ ಜಾಲತಾಣದಲ್ಲಿ ಅವಮಾನಿಸುವ ಪ್ರಯತ್ನ ನಡೆಸುತ್ತಿದ್ದ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿತ್ತು.
ದೂರು ದಾಖಲಾಗುತ್ತಿದ್ದ ತಕ್ಷಣ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡರು. ತನಿಖೆಯ ಬಳಿಕ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ಯಕ್ಷಿತ್ ರಾಜ್ ಅನ್ನು ಬಂಧಿಸಲಾಗಿದೆ. ಆರೋಪಿಯು ಮರುಮರು ಅಶ್ಲೀಲ ಕಾಮೆಂಟ್ಗಳನ್ನು ಮಾಡಿ, ಶಾಸಕಿ ಗೌರವಕ್ಕೆ ಧಕ್ಕೆ ತರುವ ಉದ್ದೇಶ ಹೊಂದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಹಿಂದೆ ಶಾಸಕಿ ನಯನಾ ಮೋಟಮ್ಮ ಕೂಡ ಇನ್ಸ್ಟಾಗ್ರಾಂನಲ್ಲಿ ಪ್ರತಿಕ್ರಿಯಿಸಿ, “ನನ್ನನ್ನು ವೇಶ್ಯೆ ಎಂದು ಕರೆಯುವ ಮಟ್ಟಕ್ಕೂ ಕೆಲವರು ಇಳಿಯುತ್ತಾರೆ” ಎಂದು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದರು.
ಮಹಿಳಾ ವಿರೋಧಿ ಮನೋಭಾವವನ್ನು ನಾನು ವಿರೋಧಿಸುತ್ತೇನೆ. ಸ್ಲೀವ್ ಲೆಸ್ ಬಟ್ಟೆ ಹಾಕಿದರೆ ಕೆಲಸ ಮಾಡದ ರಾಜಕಾರಣಿ ಎನ್ನುತ್ತಾರೆ. ಡಿಪಿ ಇಲ್ಲದ ಪ್ರೊಫೈಲ್ಗಳಿಂದ ಅವಮಾನಕಾರಿ ಕಾಮೆಂಟ್ಗಳನ್ನು ಮಾಡುತ್ತಾರೆ. ಬಹುಶಃ ಒಂದು ದಿನ ನಾನವರನ್ನು ಎದುರಿಸುತ್ತೇನೆ ಎಂದು ಅವರು ತಮ್ಮ ಪೋಸ್ಟ್ನಲ್ಲಿ ಬರೆದುಕೊಂಡಿದ್ದರು.
