Ashwaveega News 24×7 ಏಪ್ರಿಲ್ 9 – 2026 : ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಮತದಾನ ಜೋರಾಗಿ ನಡೆಯುತ್ತಿದೆ. ಬೆಳಿಗ್ಗೆ 7 ಗಂಟೆಯಿಂದಲೇ ಮತದಾರರು ಮತಗಟ್ಟೆಗಳಿಗೆ ಹರಿದುಬಂದು ತಮ್ಮ ಹಕ್ಕು ಚಲಾಯಿಸುತ್ತಿದ್ದಾರೆ.
ಈ ಬಾರಿ ಬಾಗಲಕೋಟೆ ಅಖಾಡದಲ್ಲಿ ಉಮೇಶ್ ಮತ್ತು ವೀರಣ್ಣ ಚರಂತಿಮಠ ನಡುವೆ ನೇರ ಪೈಪೋಟಿ ಏರ್ಪಟ್ಟಿದ್ದು, ಚುನಾವಣಾ ಕಣ ತೀವ್ರ ಕುತೂಹಲ ಮೂಡಿಸಿದೆ. ಹೆಚ್.ವೈ. ಮೇಟಿ ನಿಧನದಿಂದ ತೆರವಾಗಿರುವ ಈ ಕ್ಷೇತ್ರದಲ್ಲಿ ಒಟ್ಟು 34 ಅಭ್ಯರ್ಥಿಗಳ ಅದೃಷ್ಟಪರೀಕ್ಷೆ ನಡೆಯುತ್ತಿದೆ.
ಕ್ಷೇತ್ರದಲ್ಲಿ ಒಟ್ಟು 2.59 ಲಕ್ಷ ಮತದಾರರು ಇದ್ದು, 322 ಮತಗಟ್ಟೆಗಳು ಸ್ಥಾಪಿಸಲಾಗಿದೆ. ಮತದಾನ ಪ್ರಕ್ರಿಯೆಯನ್ನು ಸುಗಮವಾಗಿ ನಡೆಸಲು 1,564 ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಮತಗಟ್ಟೆ ಕೇಂದ್ರಗಳ ಸುತ್ತ ಭದ್ರತೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗಿದ್ದು, ಖಾಕಿ ಸರ್ಪಗಾವಲು ನಿರ್ಮಿಸಲಾಗಿದೆ. ವಿಶೇಷವಾಗಿ ಸೂಕ್ಷ್ಮ ಮತಗಟ್ಟೆಗಳಲ್ಲಿ ಹೆಚ್ಚುವರಿ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ.
ರಾಜಕೀಯವಾಗಿ ಈ ಉಪಚುನಾವಣೆ ಮಹತ್ವ ಪಡೆದಿದ್ದು, ಕ್ಷೇತ್ರವನ್ನು ಉಳಿಸಿಕೊಳ್ಳಲು “ಕೈ” ನಾಯಕರು ಶತಪ್ರಯತ್ನ ನಡೆಸುತ್ತಿದ್ದಾರೆ. ಇನ್ನೊಂದೆಡೆ, ಗೆಲುವಿನ ಧ್ಯೇಯದಿಂದ ಕೇಸರಿಪಡೆ ರಣತಂತ್ರ ರೂಪಿಸಿಕೊಂಡಿದೆ.
ಒಟ್ಟಾರೆ, ಬಾಗಲಕೋಟೆ ಉಪಚುನಾವಣೆ ರಾಜಕೀಯ ಕಾದಾಟಕ್ಕೆ ಸಾಕ್ಷಿಯಾಗಿದ್ದು, ಮತದಾರರಿಂದ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ .
