Ashwaveega News 24×7 ಏಪ್ರಿಲ್ 5 – 2026 : ಬಾಗಲಕೋಟೆಯ ಕುಮಾರೇಶ್ವರ ಕಾಲೇಜು ಕ್ಯಾಂಪಸ್ನಲ್ಲಿ ರಾಜಕೀಯ ಉದ್ವಿಗ್ನತೆ ತಾರಕಕ್ಕೇರಿದೆ. ಕಾಂಗ್ರೆಸ್ ವಿದ್ಯಾರ್ಥಿ ಸಂಘಟನೆ ಎನಿಸಿರುವ NSUI ಕಾರ್ಯಕರ್ತರ ವಿರುದ್ಧ ಬಿಜೆಪಿ ಮುಖಂಡರು ಗಂಭೀರ ಆರೋಪಗಳನ್ನು ಹೊರಿಸಿದ್ದಾರೆ.
ಕ್ಯಾಂಪಸ್ಗೆ ಸುಮಾರು 18 ಜನರ ತಂಡ ಕರಪತ್ರಗಳನ್ನು ಹಿಡಿದು ಪ್ರವೇಶಿಸಿರುವುದಾಗಿ ಹೇಳಲಾಗುತ್ತಿದೆ. ಈ ತಂಡ ಸರ್ಕಾರಿ ವಾಹನದಲ್ಲಿ ಬಂದು, ಕೇಸರಿ ಶಾಲು ಧರಿಸಿ ಕಾಲೇಜಿನೊಳಗೆ ಪ್ರಚಾರ ನಡೆಸಿದರೆಂಬ ಆರೋಪ ಕೇಳಿಬಂದಿದೆ . ಈ ವೇಳೆ ಬಿಜೆಪಿ ಅಭ್ಯರ್ಥಿ ವಿರುದ್ಧ ಅಪಪ್ರಚಾರ ಮಾಡಲಾಗಿದೆ ಎಂದು ಬಿಜೆಪಿ ಕಾರ್ಯಕರ್ತರು ಆರೋಪಿಸಿದ್ದಾರೆ.
ಇನ್ನೊಂದು ಗಂಭೀರ ಆರೋಪವೆಂದರೆ, “ಬಿಜೆಪಿಗೆ ಮತ ಹಾಕಿದರೆ ಸುಮ್ಮನೆ ಬಿಡೋದಿಲ್ಲ, ಜೈಲು ಫಿಕ್ಸ್” ಎಂಬ ರೀತಿಯ ಬೆದರಿಕೆ ಸಂದೇಶಗಳನ್ನು ಕರಪತ್ರದಲ್ಲಿ ಉಲ್ಲೇಖಿಸಲಾಗಿದೆ ಎನ್ನಲಾಗಿದೆ. ಅಲ್ಲದೇ, ಬಿಜೆಪಿ ಅಭ್ಯರ್ಥಿಯ ಭಾವಚಿತ್ರಕ್ಕೆ X ಗುರುತು ಹಾಕಿ ವಿದ್ಯಾರ್ಥಿಗಳಲ್ಲಿ ತಪ್ಪು ಸಂದೇಶ ಹಬ್ಬಿಸಲು ಯತ್ನಿಸಲಾಗಿದೆ ಎಂಬುದಾಗಿ ತಿಳಿದುಬಂದಿದೆ.
ಈ ಘಟನೆಗೆ ಸಂಬಂಧಿಸಿದಂತೆ ಕ್ಯಾಂಪಸ್ನಲ್ಲಿ NSUI ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ವಾಗ್ವಾದ ಉಂಟಾಗಿ, ನಂತರ ಗಲಾಟೆಗೆ ತಿರುಗಿದೆ. ಪರಿಸ್ಥಿತಿ ತೀವ್ರವಾಗುತ್ತಿದ್ದಂತೆ ಪೊಲೀಸರು ಮಧ್ಯಪ್ರವೇಶಿಸಿ 7 ಮಂದಿಯನ್ನು ವಶಕ್ಕೆ ಪಡೆದಿದ್ದಾರೆ.
ಇನ್ನೂ 11 ಜನರನ್ನು ಬಂಧಿಸಬೇಕು ಎಂದು ಬಿಜೆಪಿ ನಾಯಕರು ಒತ್ತಾಯಿಸುತ್ತಿದ್ದು, ಪ್ರಕರಣ ಮತ್ತಷ್ಟು ತೀವ್ರವಾಗುವ ಸಾಧ್ಯತೆ ಇದೆ. ಈ ಘಟನೆಯಿಂದ ಶಿಕ್ಷಣ ಸಂಸ್ಥೆಗಳಲ್ಲಿ ರಾಜಕೀಯ ಹಸ್ತಕ್ಷೇಪ ಕುರಿತು ಮತ್ತೆ ಚರ್ಚೆಗಳು ಜೋರಾಗಿವೆ.
