Ashwaveega News 24×7 ಮಾರ್ಚ್ 20 – 2026 : ಬಾಗಲಕೋಟೆ : ಬೈಎಲೆಕ್ಷನ್ ಘೋಷಣೆಯ ಬೆನ್ನಲ್ಲೇ ಬಾಗಲಕೋಟೆ ಕ್ಷೇತ್ರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ಜೋರಾಗಿ ಗ್ರೌಂಡ್ ವರ್ಕ್ ಆರಂಭಿಸಿವೆ . ಅಭ್ಯರ್ಥಿಗಳ ಘೋಷಣೆ ಆಗುತ್ತಿದ್ದಂತೆಯೇ ಎರಡೂ ಪಕ್ಷಗಳು ಬೂತ್ ಮಟ್ಟದಲ್ಲಿ ರಣತಂತ್ರ ರೂಪಿಸಲು ಮುಂದಾಗಿವೆ.
ಬಿಜೆಪಿ ಅಭ್ಯರ್ಥಿ ಘೋಷಣೆ ಮಾಡಿದ ತಕ್ಷಣವೇ ಬೂತ್ ಮಟ್ಟದಲ್ಲಿ ಮತದಾರರ ಮಾಹಿತಿ ಸಂಗ್ರಹಿಸಿ ಸಂಘಟನೆ ಬಲಪಡಿಸಲು ಕ್ರಮ ಕೈಗೊಂಡಿದೆ. ಇತ್ತ ಕಾಂಗ್ರೆಸ್ನಲ್ಲಿ ಟಿಕೆಟ್ ಇನ್ನೂ ಅಧಿಕೃತವಾಗಿ ಘೋಷಣೆಯಾಗದಿದ್ದರೂ, ಬೂತ್ ಮಟ್ಟದ ಸರ್ವೆ ಆರಂಭವಾಗಿದೆ.
ಬೈಎಲೆಕ್ಷನ್ ನಡೆಯಲಿರುವ ಬಾಗಲಕೋಟೆ ಕ್ಷೇತ್ರದಲ್ಲಿ ಒಟ್ಟು 319 ಮತಗಟ್ಟೆಗಳಿದ್ದು, ನಗರ ಪ್ರದೇಶದಲ್ಲಿ 143 ಮತ್ತು ಗ್ರಾಮೀಣ ಪ್ರದೇಶದಲ್ಲಿ 176 ಮತಗಟ್ಟೆಗಳು ಇವೆ . ಈ ಹಿನ್ನೆಲೆಯಲ್ಲಿ ಪ್ರತಿಯೊಂದು ಬೂತ್ನಲ್ಲೂ ಮತದಾರರ ಮನಸ್ಥಿತಿ ಅರಿಯಲು ಎರಡೂ ಪಕ್ಷಗಳು ಸಕ್ರಿಯವಾಗಿವೆ.
ಕಾಂಗ್ರೆಸ್ ಪರವಾಗಿ ಸಚಿವ ಸತೀಶ ಜಾರಕಿಹೊಳಿ ಅವರ ನೇತೃತ್ವದಲ್ಲಿ ವಿಶೇಷ ತಂಡ ಈಗಾಗಲೇ ಕ್ಷೇತ್ರದಲ್ಲಿ ಬೀಡು ಬಿಟ್ಟಿದೆ. ಈ ತಂಡ ಮತದಾರರ ಅಭಿಪ್ರಾಯ, ಜಾತಿ ಲೆಕ್ಕಾಚಾರ ಸೇರಿದಂತೆ ವಿವಿಧ ಅಂಶಗಳ ಕುರಿತು ಸಮಗ್ರ ಸರ್ವೆ ನಡೆಸುತ್ತಿದೆ.
ಇತ್ತ ಬಿಜೆಪಿ ತಂಡವೂ ಬೂತ್ ಮಟ್ಟದಲ್ಲಿ ಮತ – ಮನ ಮಾಹಿತಿ ಸಂಗ್ರಹಿಸಿ ಗೆಲುವಿನ ಲೆಕ್ಕಾಚಾರದಲ್ಲಿ ತೊಡಗಿದೆ. ಎರಡೂ ಪಕ್ಷಗಳು ನಾಮಪತ್ರ ಸಲ್ಲಿಕೆಗೂ ಮುಂಚೆಯೇ ರಣತಂತ್ರಗಳನ್ನು ಅಂತಿಮಗೊಳಿಸಲು ಹರಸಾಹಸ ಪಡುತ್ತಿವೆ.
ಸತೀಶ ಜಾರಕಿಹೊಳಿ ತಂಡದ ವರದಿಯನ್ನು ಪರಿಗಣಿಸಿ ಉಮೇಶ್ ಮೇಟಿಗೆ ಟಿಕೆಟ್ ನೀಡುವ ಸಾಧ್ಯತೆ ಹೆಚ್ಚಾಗಿದೆ. ಇಂದು ಕಾಂಗ್ರೆಸ್ ಹೈಕಮಾಂಡ್ ಅಧಿಕೃತವಾಗಿ ಅಭ್ಯರ್ಥಿಯನ್ನು ಘೋಷಿಸುವ ನಿರೀಕ್ಷೆ ಇದೆ.
ಒಟ್ಟಿನಲ್ಲಿ, ಬಾಗಲಕೋಟೆ ಬೈಎಲೆಕ್ಷನ್ ರಾಜಕೀಯ ಕಣ ರಂಗೇರಿದ್ದು, ಬೂತ್ ಮಟ್ಟದ ಚಟುವಟಿಕೆಗಳು ಫಲಿತಾಂಶದ ದಿಕ್ಕು ತೋರಿಸಲಿವೆ.
