Ashwaveega News 24×7 ಮಾರ್ಚ್ 20 – 2026 : ಬೆಂಗಳೂರು : ರಾಜ್ಯದ ಆಡಳಿತ ಶಕ್ತಿಕೇಂದ್ರವೇ ಆಗಿರುವ ವಿಧಾನಸೌಧ ಸುತ್ತಮುತ್ತ ಮೂಲಭೂತ ಸೌಕರ್ಯಗಳ ಸ್ಥಿತಿ ಪ್ರಶ್ನಾರ್ಥಕವಾಗಿರುವುದು ಗಮನ ಸೆಳೆಯುತ್ತಿದೆ. ಗೇಟ್ ನಂ.2 ಬಳಿಯಿರುವ ರಸ್ತೆ ಕಲ್ವರ್ಟ್ ಹದಗೆಟ್ಟಿದ್ದರೂ, ಅದನ್ನು ಸರಿಪಡಿಸಲು ಅಧಿಕಾರಿಗಳು ಮುಂದಾಗದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಈ ಪ್ರದೇಶದಲ್ಲಿ ನಿತ್ಯ ನೂರಾರು ಐಎಎಸ್, ಐಪಿಎಸ್ ಅಧಿಕಾರಿಗಳು ಸಂಚರಿಸುತ್ತಾರೆ. ಮಂತ್ರಿಗಳು ಹಾಗೂ ಕೆಲವೊಮ್ಮೆ ಮುಖ್ಯಮಂತ್ರಿ ಸಹ ಇದೇ ಮಾರ್ಗದಲ್ಲಿ ಓಡಾಡುತ್ತಾರೆ. ಇದರ ನಡುವೆಯೇ ಕಲ್ವರ್ಟ್ ದುಸ್ಥಿತಿಯಲ್ಲಿ ಇರುವುದರಿಂದ ವಾಹನ ಸವಾರರು ಪ್ರತಿದಿನ ಸಂಕಷ್ಟ ಅನುಭವಿಸುತ್ತಿದ್ದಾರೆ.
ಎಂಎಸ್ ಬಿಲ್ಡಿಂಗ್, ಕೆಪಿಎಸ್ಸಿ ಕಚೇರಿ ಸೇರಿದಂತೆ ಪ್ರಮುಖ ಸರ್ಕಾರಿ ಕಟ್ಟಡಗಳು ಇದೇ ಭಾಗದಲ್ಲಿ ಇರುವುದರಿಂದ ಈ ಸಮಸ್ಯೆ ಇನ್ನಷ್ಟು ಗಂಭೀರವಾಗಿದೆ.
ಕಾರು ಮತ್ತು ಬೈಕ್ ಸವಾರರು ಈ ಹಾದಿಯಲ್ಲಿ ಸಂಚರಿಸುವಾಗ ಅಪಾಯ ಎದುರಿಸುತ್ತಿದ್ದು, ಅಪಘಾತ ಸಂಭವಿಸುವ ಭೀತಿ ಹೆಚ್ಚಾಗಿದೆ. ಈ ಕುರಿತು ಹಲವು ಬಾರಿ ವರದಿ ಹಾಗೂ ದೂರು ನೀಡಿದರೂ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ ಎಂಬುದು ಸ್ಥಳೀಯರ ಆರೋಪ.
ಬೆಂಗಳೂರು ಅಭಿವೃದ್ಧಿಗೆ ಮೀಸಲಾದ ಹಣ ಎಲ್ಲಿ ಹೋಗುತ್ತಿದೆ ಎಂಬ ಪ್ರಶ್ನೆ ಮತ್ತೆ ಮೆತ್ತಿಕೊಂಡಿದೆ. ಒಂದು ಕಲ್ವರ್ಟ್ ಸರಿಪಡಿಸಲು ಸಾಧ್ಯವಾಗದಿರುವುದು ಆಡಳಿತದ ನಿರ್ಲಕ್ಷ್ಯವನ್ನು ತೋರಿಸುತ್ತದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಈ ಕುರಿತು ಬಿಜೆಪಿ ವಕ್ತಾರ ಅಶೋಕ್ ಗೌಡ ವಿಡಿಯೋ ಮಾಡಿ ಅಧಿಕಾರಿಗಳ ವಿರುದ್ಧ ಕಿಡಿಕಾರಿದ್ದು, “ಅಪಘಾತವಾದ ಮೇಲೆ ಮಾತ್ರ ಎಚ್ಚೆತ್ತುಕೊಳ್ಳುವರೇ?” ಎಂದು ಪ್ರಶ್ನಿಸಿದ್ದಾರೆ.
ಒಟ್ಟಿನಲ್ಲಿ, ಆಡಳಿತದ ಹೃದಯ ಭಾಗದಲ್ಲೇ ಇಂತಹ ನಿರ್ಲಕ್ಷ್ಯ ಮುಂದುವರಿದಿರುವುದು ಸರ್ಕಾರದ ಕಾರ್ಯಕ್ಷಮತೆ ಕುರಿತು ಪ್ರಶ್ನೆಗಳನ್ನು ಎಬ್ಬಿಸಿದೆ.
