Ashwaveega News 24×7 ಮಾರ್ಚ್ 25 – 2026 : ಬೆಂಗಳೂರು : ಬೆಂಗಳೂರು ನಗರವನ್ನು ಬೆಚ್ಚಿಬೀಳಿಸಿರುವ ಕೋಣನಕುಂಟೆ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಪಾಪಣ್ಣ ವಿರುದ್ಧದ ಪ್ರಕರಣಕ್ಕೆ ಮತ್ತಷ್ಟು ತಿರುವು ಸಿಕ್ಕಿದೆ. ಲೇಡಿ ರೌಡಿಶೀಟರ್ ಯಶಸ್ವಿನಿ ಮಾಡಿರುವ ಆರೋಪಗಳು ಇದೀಗ ಹೆಚ್ಚು ಗಂಭೀರವಾಗುತ್ತಿವೆ.
“ಏನ್ ಚಿನ್ನ, ಡಾಲು… ನನ್ನ ಜೊತೆ ಮಾತನಾಡಲ್ಲವಾ?”, “ಇನ್ಸ್ಪೆಕ್ಟರ್ ಅಂತ ಕರೀಬೇಡ, ಪಾಪು ಅಂತ ಕರೀ” ಎಂದು ಅಶ್ಲೀಲ ಹಾಗೂ ಅತಿಯಾಗಿ ವೈಯಕ್ತಿಕ ಸಂದೇಶಗಳನ್ನು ಕಳುಹಿಸುತ್ತಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾರೆ.
ಇದೇ ಅಲ್ಲದೆ, “ಕಾಫಿ ಕೊಡಿಸ್ತೀಯಾ?”, “ಮನೆಗೆ ಬರ್ಲ” ಎಂದು ನಿರಂತರವಾಗಿ ಕರೆ ಮಾಡಿ ಒತ್ತಡ ಹೇರುತ್ತಿದ್ದಾನೆ ಎನ್ನಲಾಗಿದೆ. ಮಹಿಳೆ ಪ್ರತಿಕ್ರಿಯೆ ನೀಡದಿದ್ದಾಗ, “ಯಾಕೆ ನನ್ನ ಮೆಸೇಜ್ಗೆ ರಿಪ್ಲೈ ಮಾಡಲ್ಲ?” ಎಂದು ಹಿಂಸೆ ನೀಡುತ್ತಿದ್ದಾನೆ ಎಂಬ ಆರೋಪವೂ ಕೇಳಿಬಂದಿದೆ.
ಇನ್ನೂ ಗಂಭೀರವಾಗಿ, “ನನ್ನನ್ನು ಇನ್ಸ್ಪೆಕ್ಟರ್ ಪಾಪಣ್ಣ ಅಂತ ಕರೆಯಬಾರದು… ಪಾಪು ಅಂತ ಕರೀಬೇಕು”, “ಇನ್ಸ್ಪೆಕ್ಟರ್ ಅಂತ ಅಂದ್ರೆ ಅಲ್ಲಿಗೆ ಬಂದು ಹೊಡೀತೀನಿ ನೋಡು” ಎಂದು ಬೆದರಿಕೆ ಹಾಕಿದ್ದಾನೆ ಎಂದು ಯಶಸ್ವಿನಿ ದೂರಿನಲ್ಲಿ ತಿಳಿಸಿದ್ದಾರೆ.
ಮಹಿಳೆಯ ಪ್ರಕಾರ, ಈ ರೀತಿಯ ನಿರಂತರ ಕರೆಗಳು, ಅಶ್ಲೀಲ ಮೆಸೇಜ್ಗಳು ಹಾಗೂ ಒತ್ತಡದಿಂದ ತಾನು ಮಾನಸಿಕವಾಗಿ ಕುಗ್ಗಿದ್ದೇನೆ ಎಂದು ಹೇಳಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಾಟ್ಸಾಪ್ ಚಾಟ್ಗಳು ಮತ್ತು ಆಡಿಯೋ ದಾಖಲೆಗಳೂ ಹೊರಬಂದಿದ್ದು , ವಿಚಾರಣೆಗೆ ಪ್ರಮುಖ ಸಾಕ್ಷಿಗಳಾಗಿವೆ.
ಪ್ರಸ್ತುತ ಈ ಪ್ರಕರಣ ನಗರದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದ್ದು, ಪೊಲೀಸ್ ಇಲಾಖೆಯ ಮೇಲೂ ಪ್ರಶ್ನೆಗಳು ಮೂಡಿವೆ. ಆರೋಪಗಳ ಸತ್ಯಾಸತ್ಯತೆ ಪರಿಶೀಲನೆಗಾಗಿ ಹಿರಿಯ ಅಧಿಕಾರಿಗಳು ತನಿಖೆ ಮುಂದುವರಿಸಿದ್ದಾರೆ.
