Ashwaveega News 24×7 ಮಾರ್ಚ್ 14– 2026 : ಬೆಂಗಳೂರಿನಲ್ಲಿ ಪ್ರಿಯತಮನಿಂದಲೇ ಪ್ರಿಯತಮೆಯನ್ನು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಬೆಳಕಿಗೆ ಬಂದಿದೆ. ವರ್ತೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ದುರ್ಘಟನೆ ನಡೆದಿದೆ.
ರಂಜಿತಾ (24) ಎಂಬ ಯುವತಿಯನ್ನು ಆರೋಪಿ ಅಯ್ಯಪ್ಪ ವೈಯರ್ನಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತ ರಂಜಿತಾ ಕೊಡಗು ಜಿಲ್ಲೆಯ ಪೊನ್ನಂಪೇಟೆ ನಿವಾಸಿಯಾಗಿದ್ದಳು.
ಪೊಲೀಸರ ಮಾಹಿತಿಯ ಪ್ರಕಾರ, ಆರೋಪಿ ಅಯ್ಯಪ್ಪನಿಗೆ ಈಗಾಗಲೇ ಮದುವೆಯಾಗಿದ್ದು, ಪತ್ನಿಯಿಂದ ದೂರವಿದ್ದನು. ಈ ನಡುವೆ ರಂಜಿತಾ ಜೊತೆ ಸಂಬಂಧ ಬೆಳೆಸಿಕೊಂಡಿದ್ದ ಅಯ್ಯಪ್ಪನನ್ನು ಮದುವೆಯಾಗುತ್ತೇನೆ ಎಂಬ ನಂಬಿಕೆಯಲ್ಲಿ ರಂಜಿತಾ ಮನೆಬಿಟ್ಟು ಬಂದಿದ್ದಳು .
ಆದರೆ ಮೊದಲ ಪತ್ನಿಗೆ ವಿಚ್ಛೇದನ ನೀಡದೇ ಅಯ್ಯಪ್ಪ ರಂಜಿತಾ ಜೊತೆ ವಾಸಿಸುತ್ತಿದ್ದನು. ಮದುವೆ ವಿಚಾರವಾಗಿ ಇಬ್ಬರ ನಡುವೆ ಆಗಾಗ ಜಗಳ ನಡೆಯುತ್ತಿತ್ತಂತೆ. ಇದೇ ವಿಚಾರವಾಗಿ ನಡೆದ ಗಲಾಟೆ ವಿಕೋಪಕ್ಕೆ ತಿರುಗಿ ಅಯ್ಯಪ್ಪ ರಂಜಿತಾಳನ್ನು ಕೊಲೆ ಮಾಡಿದ ಆರೋಪ ಕೇಳಿಬಂದಿದೆ.
ಘಟನೆಯ ಮಾಹಿತಿ ತಿಳಿದ ವರ್ತೂರು ಪೊಲೀಸರು ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಆರೋಪಿ ಅಯ್ಯಪ್ಪನನ್ನು ಬಂಧಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಳ್ಳಲಾಗಿದೆ.
