Ashwaveega News 24×7 ಮಾರ್ಚ್ 19 – 2026 : ಬೆಂಗಳೂರು : ನಮ್ಮ ಮೆಟ್ರೋ ರೈಲಿನಲ್ಲಿ ಹಾಡುಹಾಡಿ ಸಾರ್ವಜನಿಕರಿಗೆ ತೊಂದರೆ ನೀಡಿದ ಘಟನೆಗೆ ಸಂಬಂಧಿಸಿದಂತೆ ಮೆಟ್ರೋ ಅಧಿಕಾರಿಗಳು ಪ್ರಕರಣ ದಾಖಲಿಸಿದ್ದಾರೆ.
ಭಾನುವಾರ ರಾತ್ರಿ ನಡೆದ ಈ ಘಟನೆಯಲ್ಲಿ, ಸಂಗೀತ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮರಳುತ್ತಿದ್ದ ಯುವತಿಯರ ಗುಂಪೊಂದು ಮೆಟ್ರೋದಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಜೋರಾಗಿ ಹಾಡುಹಾಡಿ ನೃತ್ಯ ಮಾಡಿರುವುದು ಕಂಡುಬಂದಿದೆ.
ಈ ವರ್ತನೆಯಿಂದ ಮೆಟ್ರೋದಲ್ಲಿದ್ದ ಇತರ ಪ್ರಯಾಣಿಕರಿಗೆ ಅಸೌಕರ್ಯ ಉಂಟಾಗಿದ್ದು, ಕೆಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ವಿಶೇಷವಾಗಿ, ಕೆಲವು ಯುವತಿಯರು ಬೋಗಿಯ ನೆಲದ ಮೇಲೆ ಕುಳಿತು ಹಾಡುಹಾಡಿರುವುದು ಗಮನ ಸೆಳೆದಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಈ ಹಿನ್ನೆಲೆ ಮೆಟ್ರೋ ಸಿಬ್ಬಂದಿ ಪೀಣ್ಯ ಪೊಲೀಸ್ ಠಾಣೆಗೆ ದೂರು ನೀಡಿದ್ದು, ದೂರಿನ ಆಧಾರದ ಮೇಲೆ ಎನ್ಸಿಆರ್ ದಾಖಲಿಸಲಾಗಿದೆ.
ಮೆಟ್ರೋ ಆವರಣದಲ್ಲಿ ಸಾರ್ವಜನಿಕರ ಸೌಕರ್ಯ ಮತ್ತು ಶಿಸ್ತು ಕಾಪಾಡುವ ದೃಷ್ಟಿಯಿಂದ ಇಂತಹ ವರ್ತನೆಗಳ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
