Ashwaveega News 24×7 ಏಪ್ರಿಲ್ 1 – 2026 : ಬೆಂಗಳೂರು : ರಾಜ್ಯ ರಾಜಧಾನಿಯಲ್ಲಿ ವಿದ್ಯುತ್ ಸರಬರಾಜು ಸಂಸ್ಥೆಯಾದ ಬೆಸ್ಕಾಂನಲ್ಲಿ ಭಾರೀ ಅವ್ಯವಹಾರ ಬೆಳಕಿಗೆ ಬಂದಿದೆ . ಕೆಲ ಅಧಿಕಾರಿಗಳು ಮತ್ತು ಇಂಜಿನಿಯರ್ಗಳ ಸಂಧಿಯಿಂದ ಸರ್ಕಾರಕ್ಕೆ ಕೋಟ್ಯಂತರ ರೂಪಾಯಿ ನಷ್ಟ ಉಂಟಾಗುತ್ತಿರುವುದು ಬಹಿರಂಗವಾಗಿದೆ.
ಹಣದಾಸೆಗೆ ಒಳಗಾದ ಕೆಲವು ಇಂಜಿನಿಯರ್ಗಳು ನಿಯಮಗಳನ್ನು ಮೀರಿ ಅಕ್ರಮ ಕಟ್ಟಡಗಳಿಗೆ ಕಡಿಮೆ ದರದಲ್ಲಿ ವಿದ್ಯುತ್ ಸಂಪರ್ಕ ಒದಗಿಸುತ್ತಿರುವ ಆರೋಪ ಕೇಳಿಬಂದಿದೆ. ಕೈಗಾರಿಕೆಗಳು ಮತ್ತು ಉದ್ದಿಮೆಗಳಿಗೂ ಸಹ “ಪುಗ್ಸಟ್ಟೆ” ಕರೆಂಟ್ ನೀಡಲಾಗುತ್ತಿದೆ ಎಂಬ ಗಂಭೀರ ಆರೋಪಗಳು ಕೇಳಿಬಂದಿವೆ.
ರಾಜಾಜಿನಗರ 6ನೇ ಬ್ಲಾಕ್ನಲ್ಲಿ ಇರುವ 7 ಅಂತಸ್ತಿನ ಅಕ್ರಮ ಕಟ್ಟಡ ಈ ಅವ್ಯವಹಾರದ ಪ್ರಮುಖ ಉದಾಹರಣೆಯಾಗಿದೆ. ಕಟ್ಟಡದ ಮಾಲೀಕ ಹೆಚ್. ಸುಕುಮಾರ್ ಶೆಟ್ಟಿ ಅವರ ಕಂಪನಿ “ಹೋಮ್ ಮೆಡಿಕ್ಸ್” ಹೆಸರಿನಲ್ಲಿ ವಿದ್ಯುತ್ ಸಂಪರ್ಕ ಪಡೆದಿದ್ದು, ನಿಯಮಗಳಿಗೆ ವಿರುದ್ಧವಾಗಿ ವಿದ್ಯುತ್ ಬಳಕೆ ಮಾಡುತ್ತಿರುವುದು ಬಹಿರಂಗವಾಗಿದೆ.
ಗ್ರೌಂಡ್ ಫ್ಲೋರ್ಗೆ ಮಾತ್ರ 130 HP ವಿದ್ಯುತ್ ಸಂಪರ್ಕ ಪಡೆಯಲಾಗಿದ್ದು, ಮೊದಲ ಮಹಡಿಗೆ ಸಂಬಂಧಿಕರ ಹೆಸರಿನಲ್ಲಿ 100 HP ಸಂಪರ್ಕ ಪಡೆದಿರುವುದು ಪತ್ತೆಯಾಗಿದೆ. ಆದರೆ, ವಾಸ್ತವದಲ್ಲಿ ಈ ವಿದ್ಯುತ್ ಸಂಪೂರ್ಣ ಕಟ್ಟಡದ ಏಳು ಮಹಡಿಗಳಿಗೂ ಬಳಸಲಾಗುತ್ತಿದೆ ಎಂಬ ಆರೋಪ ಇದೆ.
ಅಧಿಕಾರಿಗಳಿಗೆ ನೀಡಿದ ಹೇಳಿಕೆಯಲ್ಲಿ ಉಳಿದ ಮಹಡಿಗಳಿಗೆ ವಿದ್ಯುತ್ ಬಳಕೆ ಇಲ್ಲ ಎಂದು ಹೇಳಿಕೊಂಡಿದ್ದರೂ, ನಿಜವಾಗಿ ಎಲ್ಲಾ ಮಹಡಿಗಳಿಗೂ ಅಕ್ರಮವಾಗಿ ವಿದ್ಯುತ್ ಬಳಕೆ ಮಾಡಲಾಗುತ್ತಿದೆ ಎನ್ನಲಾಗಿದೆ. LT ಸಾಮರ್ಥ್ಯದ ಸಂಪರ್ಕ ಪಡೆದು HT ಮಟ್ಟದ ವಿದ್ಯುತ್ ಬಳಕೆ ಮಾಡುತ್ತಿರುವುದರಿಂದ ಬೆಸ್ಕಾಂಗೆ ಲಕ್ಷಾಂತರವಲ್ಲ, ಕೋಟ್ಯಂತರ ರೂಪಾಯಿ ನಷ್ಟವಾಗುತ್ತಿದೆ.
ಈ ಅಕ್ರಮದಲ್ಲಿ ಬೆಸ್ಕಾಂನ ಕೆಲ ಅಧಿಕಾರಿಗಳ ನೇರ ಕೈವಾಡವಿದೆ ಎಂಬ ಆರೋಪವೂ ಕೇಳಿಬಂದಿದೆ. ಹಣದಾಸೆಗೆ ಒಳಗಾದ ಅಧಿಕಾರಿಗಳು ನಿಯಮಗಳನ್ನು ಕಡೆಗಣಿಸಿ ಅಕ್ರಮ ಸಂಪರ್ಕಗಳಿಗೆ ಮನ್ನಣೆ ನೀಡುತ್ತಿದ್ದಾರೆ ಎಂಬುದು ಸ್ಥಳೀಯರ ಆರೋಪ.
ಈ ಪ್ರಕರಣವು ಬೆಸ್ಕಾಂನ ಆಡಳಿತ ವ್ಯವಸ್ಥೆಯ ಮೇಲೆ ಪ್ರಶ್ನಾರ್ಹ ಚಿಹ್ನೆ ಮೂಡಿಸಿದ್ದು, ಸರ್ಕಾರ ತಕ್ಷಣ ತನಿಖೆ ನಡೆಸಿ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂಬ ಒತ್ತಾಯಗಳು ಕೇಳಿಬರುತ್ತಿವೆ.
ಅಕ್ರಮ ಕಟ್ಟಡಗಳು, ಅಕ್ರಮ ವಿದ್ಯುತ್ ಸಂಪರ್ಕಗಳು ಮತ್ತು ಅಧಿಕಾರಿಗಳ ಭ್ರಷ್ಟಾಚಾರ – ಈ ಮೂರರ ಸಂಧಿಯಿಂದ ಬೆಸ್ಕಾಂಗೆ ಭಾರೀ ಆರ್ಥಿಕ ನಷ್ಟ ಉಂಟಾಗುತ್ತಿದೆ. ಈ ದಂಧೆಗೆ ಕಡಿವಾಣ ಹಾಕುವುದು ಇದೀಗ ಸರ್ಕಾರದ ಮುಂದಿರುವ ದೊಡ್ಡ ಸವಾಲಾಗಿದೆ.
