Ashwaveega News 24×7 ಫೆಬ್ರವರಿ 10 -2026 – ನಂಜನಗೂಡು: ಗ್ರಾಮದೇವತೆ ಜಾತ್ರೆ ವೇಳೆ ರೀಲ್ಸ್, ವಿಡಿಯೋ ಮಾಡುವವರಿಗೆ ಬಿಗ್ ಶಾಕ್ ಎದುರಾಗಿದೆ. ನಂಜನಗೂಡು ತಾಲ್ಲೂಕಿನ ಗೋಳೂರು ಗ್ರಾಮದಲ್ಲಿ ನಡೆಯಲಿರುವ ಗ್ರಾಮದೇವತೆ ಮಾರಮ್ಮನ ಜಾತ್ರೆ ಸಂದರ್ಭದಲ್ಲಿ ಯಾವುದೇ ರೀತಿಯ ವಿಡಿಯೋ ಚಿತ್ರೀಕರಣಕ್ಕೆ ನಿಷೇಧ ವಿಧಿಸಲಾಗಿದೆ.
ಜಾತ್ರೆಗೆ ಬರುವ ರೀಲ್ಸ್ ಲವರ್ಸ್ಗಳಿಗೆ ಮುಂಚಿತವಾಗಿಯೇ ಎಚ್ಚರಿಕೆ ನೀಡಿರುವ ಗ್ರಾಮಸ್ಥರು, ಜಾತ್ರೆ ವೇಳೆ ವಿಡಿಯೋ ಅಥವಾ ರೀಲ್ಸ್ ಮಾಡಿದರೆ ₹30,000 ದಂಡ ವಿಧಿಸಲಾಗುವುದು ಎಂದು ಡಂಗೂರ ಸಾರಿದ್ದಾರೆ.
ಹೆಣ್ಮಕ್ಕಳ ಫೋಟೋ ಅಥವಾ ವಿಡಿಯೋ ತೆಗೆಯುವುದು, ಮದ್ಯಪಾನ ಮಾಡಿ ಗಲಾಟೆ ಸೃಷ್ಟಿಸುವುದು ಸೇರಿದಂತೆ ಜಾತ್ರೆಯ ಪಾವಿತ್ರ್ಯಕ್ಕೆ ಧಕ್ಕೆ ತರುವ ಯಾವುದೇ ಚಟುವಟಿಕೆಗಳಿಗೆ ಸಂಪೂರ್ಣ ನಿಷೇಧ ಹೇರಲಾಗಿದೆ. ನಿಯಮ ಉಲ್ಲಂಘಿಸಿದವರ ವಿರುದ್ಧ ದಂಡದ ಜೊತೆಗೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಗ್ರಾಮಸ್ಥರು ಸ್ಪಷ್ಟಪಡಿಸಿದ್ದಾರೆ.
ಗ್ರಾಮದಲ್ಲಿನ ಹೆಣ್ಮಕ್ಕಳ ಗೌಪ್ಯತೆ ಮತ್ತು ಗೌರವ ಕಾಪಾಡುವ ಉದ್ದೇಶದಿಂದಲೇ ಈ ಕಠಿಣ ಕ್ರಮ ಕೈಗೊಳ್ಳಲಾಗಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಇಂದಿನಿಂದ ಮೂರು ದಿನಗಳ ಕಾಲ ಗೋಳೂರು ಗ್ರಾಮದಲ್ಲಿ ಮಾರಮ್ಮನ ಜಾತ್ರೆ ನಡೆಯಲಿದ್ದು, ಜಾತ್ರೆ ಶಾಂತಿ, ಸಂಸ್ಕೃತಿ ಹಾಗೂ ಸಂಪ್ರದಾಯದ ಮೌಲ್ಯ ಉಳಿಸಿಕೊಳ್ಳುವಂತೆ ಗ್ರಾಮಸ್ಥರು ಜಾತ್ರೆಗೆ ಆಗಮಿಸುವವರಿಗೆ ಮನವಿ ಮಾಡಿದ್ದಾರೆ.
