ashwaveega news 24×7 ಮಾರ್ಚ್26.2026 ಕೊಪ್ಪಳ: ತುಂಗಭದ್ರಾ ಜಲಾಯಷ ಕ್ರೆಸ್ಟ್ ಗೇಟ್ ಸಂಖ್ಯೆ 19 ಕಿತ್ತುಹೋದ ಘಟನೆ ಬಳಿಕ ಎರಡು ವರ್ಷಗಳಿಂದ ನಾಲ್ಕು ಜಿಲ್ಲೆಗಳ ರೈತರು ಎದುರಿಸುತ್ತಿದ್ದ ಸಂಕಷ್ಟಕ್ಕೆ ಪರಿಹಾರ ಕಂಡುಕೊಳ್ಳಲು ಸರ್ಕಾರ ಮಹತ್ವದ ಕ್ರಮ ಕೈಗೊಂಡಿದೆ. ಗೇಟ್ಗಳ ಬದಲಾವಣೆಯ ಜೊತೆಗೆ ಇದೀಗ ಅವುಗಳನ್ನು ಕಾರ್ಯನಿರ್ವಹಿಸಲು ಅಗತ್ಯವಾದ ಚೈನ್ಗಳನ್ನೂ ಬದಲಾಯಿಸಲು ನಿರ್ಧರಿಸಲಾಗಿದೆ. 2024ರ ಆಗಸ್ಟ್ 10ರಂದು ರಾತ್ರಿ ಕ್ರೆಸ್ಟ್ ಗೇಟ್ ಸಂಖ್ಯೆ 19 ಕಿತ್ತುಹೋಗಿದ್ದು, ಇದಕ್ಕೆ ಮೂಲ ಕಾರಣ ಗೇಟ್ಗಳ ಅವಧಿ ಮೀರಿದ್ದರೂ ಅವುಗಳನ್ನು ಬದಲಾಯಿಸದಿರುವುದು ಹಾಗೂ ಚೈನ್ ಡಿಲಿಂಕ್ ಆಗಿರುವುದು ಎಂದು ತಜ್ಞರು ತಿಳಿಸಿದ್ದರು. ಈ ಘಟನೆ ನಂತರ ಸರ್ಕಾರ ಎಚ್ಚೆತ್ತುಕೊಂಡು ಸಂಪೂರ್ಣ ಗೇಟ್ಗಳ ಬದಲಾವಣೆಗೆ ಮುಂದಾಯಿತು.

ಸುಮಾರು 42 ಕೋಟಿ ರೂ. ವೆಚ್ಚದಲ್ಲಿ 33 ಗೇಟ್ಗಳನ್ನು ಬದಲಾಯಿಸುವ ಕಾಮಗಾರಿ ಆರಂಭವಾದರೂ, ಆರಂಭದಲ್ಲಿ ಚೈನ್ಗಳನ್ನು ಬದಲಾಯಿಸದೇ ಹಳೆಯ ಚೈನ್ಗಳನ್ನೇ ಮುಂದುವರಿಸಲು ನಿರ್ಧರಿಸಲಾಗಿತ್ತು. ಇದಕ್ಕೆ ರೈತರಿಂದ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ, ಸರ್ಕಾರ ತನ್ನ ನಿರ್ಧಾರವನ್ನು ಪರಿಷ್ಕರಿಸಿದೆ.
ತುಂಗಭದ್ರಾ ಡ್ಯಾಂ ಎಲ್ಲ ಗೇಟ್ಗಳಿಗೆ ಹೊಸ ಚೈನ್
ಇದೀಗ ಎಲ್ಲಾ 33 ಗೇಟ್ಗಳಿಗೆ ಹೊಸ ಚೈನ್ಗಳನ್ನು ಅಳವಡಿಸಲು ಸುಮಾರು 5.5 ಕೋಟಿ ರೂ. ಹೆಚ್ಚುವರಿ ಅನುದಾನ ಬಿಡುಗಡೆ ಮಾಡಲಾಗಿದ್ದು, ಟೆಂಡರ್ ಪ್ರಕ್ರಿಯೆ ಆರಂಭವಾಗಿದೆ. ಈ ಕುರಿತು ಪ್ರತಿಕ್ರಿಯೆ ನೀಡಿದ ಸಣ್ಣ ನೀರಾವರಿ ಸಚಿವ ಎನ್.ಎಸ್. ಬೋಸರಾಜು, ಗೇಟ್ಗಳ ಜೊತೆಗೆ ಚೈನ್ಗಳನ್ನೂ ಬದಲಾಯಿಸಲಾಗುವುದು ಎಂದು ತಿಳಿಸಿದ್ದಾರೆ.
