Ashwaveega News 24×7 ಮಾರ್ಚ್ 21 – 2026 : ದಾವಣಗೆರೆಯಲ್ಲಿ ಬಿಜೆಪಿ ಪಾಳಯದಲ್ಲಿ ಒಳಗದ್ದಲ ತಲೆದೋರಿದ್ದು, ಪಕ್ಷಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಅಭ್ಯರ್ಥಿ ಘೋಷಣೆ ನಂತರ ಮೇಲ್ನೋಟಕ್ಕೆ ಎಲ್ಲರೂ ಒಗ್ಗಟ್ಟಿನ ಮಾತುಗಳನ್ನಾಡುತ್ತಿದ್ದರೂ , ಒಳಗೊಳಗೆ ಗುಂಪುಗಾರಿಕೆ ಇನ್ನೂ ಶಮನವಾಗಿಲ್ಲ ಎಂಬುದು ಸ್ಪಷ್ಟವಾಗಿದೆ .
ಶ್ರೀನಿವಾಸ್ ದಾಸಕರಿಯಪ್ಪ ಅವರಿಗೆ ಟಿಕೆಟ್ ನೀಡಿರುವುದರಿಂದ ಕೆಲವು ವಲಯಗಳಲ್ಲಿ ಅಸಮಾಧಾನ ಉಂಟಾಗಿದೆ . ಒಂದೇ ವೇದಿಕೆಯಲ್ಲಿ ಜಿ.ಎಂ. ಸಿದ್ದೇಶ್ವರ್ ಹಾಗೂ ಎಂ.ಪಿ. ರೇಣುಕಾಚಾರ್ಯ ಕಾಣಿಸಿಕೊಂಡು ಒಗ್ಗಟ್ಟಿನ ಸಂದೇಶ ನೀಡಿದರೂ, ಅದು ಕೇವಲ ಮೇಲ್ನೋಟದ ಜಪವೇ ಎಂಬ ಅನುಮಾನ ವ್ಯಕ್ತವಾಗುತ್ತಿದೆ .
ವಿಶೇಷವಾಗಿ ರೇಣುಕಾಚಾರ್ಯ ಬಣದ ಅಸಮಾಧಾನ ಇನ್ನೂ ಕೊತಕೊತ ಕುದಿಯುತ್ತಿದ್ದು, ಶ್ರೀನಿವಾಸ್ ಪರ ಪೂರ್ಣ ಬೆಂಬಲ ಸಿಗುತ್ತದೆಯೇ ಎಂಬ ಪ್ರಶ್ನೆ ಎದುರಾಗಿದೆ. ಕೆಲವು ಅತೃಪ್ತ ನಾಯಕರು ಪ್ರಚಾರದಿಂದ ದೂರ ಉಳಿಯುವ ಸಾಧ್ಯತೆಯೂ ಇದ್ದು, ಇದು ಚುನಾವಣಾ ಫಲಿತಾಂಶದ ಮೇಲೆ ಪರಿಣಾಮ ಬೀರುವ ಆತಂಕ ವ್ಯಕ್ತವಾಗಿದೆ .
ಬಣ ರಾಜಕೀಯ ಮುಂದುವರಿದರೆ, ಬಿಜೆಪಿಗೆ ಸೋಲಿನ ಭೀತಿ ಕಾಡಬಹುದು. ಇದೇ ಸ್ಥಿತಿಯನ್ನು ಕಾಂಗ್ರೆಸ್ ಲಾಭಕ್ಕೆ ಬಳಸಿಕೊಳ್ಳುವ ಸಾಧ್ಯತೆ ಹೆಚ್ಚಿದ್ದು, ‘ಕೈ’ಗೆ ಗೆಲುವಿನ ಬಾಗಿಲು ತೆರೆಯುವ ಪರಿಸ್ಥಿತಿ ನಿರ್ಮಾಣವಾಗಬಹುದು .
ಈ ನಡುವೆ ಎಲ್ಲಾ ನಾಯಕರನ್ನು ಒಂದೇ ವೇದಿಕೆಗೆ ತಂದು ಒಗ್ಗೂಡಿಸುವುದು ಬಿಜೆಪಿ ವರಿಷ್ಠರ ಮುಂದಿರುವ ದೊಡ್ಡ ಸವಾಲಾಗಿದೆ. ರಾಜ್ಯಾಧ್ಯಕ್ಷ ವಿಜಯೇಂದ್ರ ಅವರಿಗೆ ಇದು ಮಹತ್ವದ ಪರೀಕ್ಷೆಯಾಗಿದ್ದು, ಅವರು ಹೇಗೆ ಪರಿಸ್ಥಿತಿಯನ್ನು ನಿಭಾಯಿಸುತ್ತಾರೆ ಎಂಬುದರ ಮೇಲೆ ಮುಂದಿನ ರಾಜಕೀಯ ಸಮೀಕರಣಗಳು ಅವಲಂಬಿತವಾಗಿವೆ .
ಒಟ್ಟಿನಲ್ಲಿ, ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಬಿಜೆಪಿ ಒಳರಾಜಕೀಯವೇ ಚುನಾವಣೆಯ ದಿಕ್ಕು ತೋರಿಸುವ ಪ್ರಮುಖ ಅಂಶವಾಗಲಿದೆ …
