Ashwaveega News 24×7 ಮಾರ್ಚ್ 11 – 2026 : ಬೆಂಗಳೂರು : ರಾಜ್ಯ ರಾಜಕೀಯದಲ್ಲಿ ಬಿಜೆಪಿ–ಜೆಡಿಎಸ್ ಮೈತ್ರಿ ಸೀಟು ಹಂಚಿಕೆ ವಿಚಾರದಲ್ಲಿ ಮೆಗಾ ಟ್ವಿಸ್ಟ್ ಕಂಡುಬಂದಿದೆ. ವಿಧಾನ ಪರಿಷತ್ ಚುನಾವಣೆಗೆ ಸಂಬಂಧಿಸಿದಂತೆ ಬಿಜೆಪಿ ಜೆಡಿಎಸ್ಗೆ ಒಂದು ಸ್ಥಾನ ಬಿಟ್ಟುಕೊಟ್ಟಿದ್ದರೂ, ಅದನ್ನು ಸ್ವೀಕರಿಸುವ ಬಗ್ಗೆ ದಳಪತಿಗಳು ನಿರಾಸಕ್ತಿ ತೋರಿರುವುದು ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ .
ಮೂಲಗಳ ಪ್ರಕಾರ, ಬೆಂಗಳೂರು ಶಿಕ್ಷಕರ ಕ್ಷೇತ್ರದಲ್ಲಿ ಸ್ಪರ್ಧಿಸಲು ಜೆಡಿಎಸ್ ಆಸಕ್ತಿ ತೋರಿಸುತ್ತಿಲ್ಲ. ಈ ಕ್ಷೇತ್ರದಲ್ಲಿ ಬಿಜೆಪಿಯೇ ಸ್ಪರ್ಧಿಸಲಿ ಎಂಬುದು ಜೆಡಿಎಸ್ ನಾಯಕರ ಇಂಗಿತ ಎಂದು ತಿಳಿದುಬಂದಿದೆ.
ಈ ಬೆಳವಣಿಗೆಯ ನಡುವೆಯೇ ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ ಹೈಕಮಾಂಡ್ ಜೊತೆ ಮಾತುಕತೆ ನಡೆಸಲು ಯೋಜನೆ ರೂಪಿಸಿದ್ದಾರೆ ಎನ್ನಲಾಗಿದೆ. ಅಗತ್ಯವಿದ್ದರೆ “ನೀವೇ ನಾಲ್ಕೂ ಸ್ಥಾನಗಳನ್ನು ಇಟ್ಟುಕೊಳ್ಳಿ, ನಮಗೆ ಬೇಡ” ಎಂದು ಹೇಳುವ ಸಾಧ್ಯತೆಯೂ ಇದೆ .
ಆದರೆ ಜೆಡಿಎಸ್ ಬೆಂಗಳೂರು ಶಿಕ್ಷಕರ ಕ್ಷೇತ್ರದ ಬಗ್ಗೆ ಏಕೆ ನಿರಾಸಕ್ತಿ ತೋರಿಸುತ್ತಿದೆ? ಬಿಜೆಪಿ ಈ ಕ್ಷೇತ್ರವನ್ನು ಬಿಟ್ಟುಕೊಡಲು ಹಿಂದೆ ಯಾವುದಾದರೂ ರಾಜಕೀಯ ಲೆಕ್ಕಾಚಾರ ಇದೆಯೇ ಎಂಬ ಪ್ರಶ್ನೆಗಳು ಇದೀಗ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿವೆ .
ವಿಧಾನ ಪರಿಷತ್ ಚುನಾವಣೆಗೆ ಮುನ್ನ ಮೈತ್ರಿ ಪಕ್ಷಗಳ ನಡುವಿನ ಈ ಹೊಸ ಬೆಳವಣಿಗೆ ರಾಜ್ಯ ರಾಜಕೀಯದಲ್ಲಿ ಮತ್ತೊಂದು ಕುತೂಹಲಕರ ತಿರುವು ತಂದುಕೊಟ್ಟಿದೆ .
