Ashwaveega News 24×7 ಜನವರಿ 12 – Kogilu Layout – ಬೆಂಗಳೂರು: ರಾಜ್ಯದಲ್ಲಿ ಭಾರೀ ವಿವಾದಕ್ಕೆ ಒಳಗಾದ ಕೋಗಿಲು ಬಡಾವಣೆ ಅಕ್ರಮ ತೆರವು ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಸತ್ಯಶೋಧನಾ ಸಮಿತಿ ವರದಿ ಸಲ್ಲಿಕೆ ಮಾಡಿದೆ. 108 ಪುಟಗಳ ವರದಿಯಲ್ಲಿ ಐದು ಶಿಫಾರಸುಗಳನ್ನು ಮಾಡಲಾಗಿದೆ. ಅಲ್ಲದೆ ಈ ಪ್ರಕರಣದ ತನಿಖೆಯನ್ನು ಎನ್ ಐ ಎ ಗೆ ನೀಡುವಂತೆ ಆಗ್ರಹಿಸಿದೆ.
ಬೆಂಗಳೂರು ನಗರದ ಯಲಹಂಕ ಸಮೀಪದ ಕೋಗಿಲು ಲೇಔಟ್ ಫಕೀರ್ ಕಾಲೋನಿ ಮತ್ತು ವಸೀಮ್ ಬಡಾವಣೆಯಲ್ಲಿ 200ಕ್ಕೂ ಹೆಚ್ಚು ಮನೆಗಳನ್ನು ನೆಲಸಮ ಮಾಡಿರುವ ವಿಚಾರ ಭಾರೀ ಚರ್ಚೆಗೆ ಕಾರಣವಾಗಿದೆ. ಈ ಕುರಿತು ವರದಿ ನೀಡಲು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಿಕಾರಿಪುರ ಶಾಸಕ ಬಿ.ವೈ.ವಿಜಯೇಂದ್ರ ಸತ್ಯಶೋಧನಾ ತಂಡವನ್ನು ರಚಿಸಿದ್ದರು. ಬೆಂಗಳೂರು ನಗರದಲ್ಲಿ ಸೋಮವಾರ ಸಮಿತಿ ವರದಿಯನ್ನು ಬಿ.ವೈ.ವಿಜಯೇಂದ್ರ ಅವರಿಗೆ ನೀಡಿದೆ.
ಬಿಜೆಪಿ ಶಾಸಕ ಎಸ್ ಆರ್ ವಿಶ್ವನಾಥ್, ಎಸ್ ಮುನಿರಾಜು, ಕೆ ಎಸ್ ನವೀನ್, ಮಾಳವಿಕಾ ಅವಿನಾಶ್, ತಮ್ಮೇಶ್ ಗೌಡ, ಎಸ್ ಹರೀಶ್, ಭಾಸ್ಕರ್ ರಾವ್ ನೇತೃತ್ವದಲ್ಲಿ ಸಮಿತಿ ರಚನೆ ಮಾಡಲಾಗಿತ್ತು. ಈ ಸಮಿತಿ ಸೋಮವಾರ ವರದಿ ಯನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರಿಗೆ ಸಲ್ಲಿಸಿದೆ.
ಅಕ್ರಮ ವಲಸಿಗರ ಮನೆಗಳ ತೆರವು ವಿಚಾರದಲ್ಲಿ ರಚಿಸಲಾಗಿದ್ದ ಪಕ್ಷದ ಸತ್ಯ ಶೋಧನಾ ಸಮಿತಿಯಿಂದ ವರದಿಯನ್ನು ಬಿ.ವೈ.ವಿಜಯೇಂದ್ರ ಸ್ವೀಕರಿಸಿದ್ದಾರೆ. ಶಾಸಕರಾದ ಎಸ್.ಆರ್. ವಿಶ್ವನಾಥ್ ನೇತೃತ್ವದ ಸತ್ಯಶೋಧನ ತಂಡ ಸ್ಥಳಕ್ಕೆ ಭೇಟಿ ನೀಡಿ, ವ್ಯಾಪಕವಾಗಿ ಮಾಹಿತಿ ಕಲೆ ಹಾಕಿ, ಸದರಿ ಜಾಗದ ಸಂಪೂರ್ಣ ವಿವರ, ಸರ್ವೇ ನಂಬರ್, ಗೂಗಲ್ ಮ್ಯಾಪ್, ಕಾನೂನುಗಳು ಸೇರಿದಂತೆ ಸಮಗ್ರ ವಿವರವನ್ನು ಒಳಗೊಂಡ ವರದಿಯನ್ನು ಸಲ್ಲಿಸಿದೆ.
ಸಮಿತಿಯ ಸದಸ್ಯರಾದ ಶಾಸಕ ಎಸ್.ಮುನಿರಾಜು, ವಿಧಾನಪರಿಷತ್ ಸದಸ್ಯ ಕೆ.ಎಸ್. ನವೀನ್, ಪಕ್ಷದ ರಾಜ್ಯ ಉಪಾಧ್ಯಕ್ಷೆ ಮಾಳವಿಕಾ ಅವಿನಾಶ್, ರಾಜ್ಯ ಕಾರ್ಯದರ್ಶಿ ಹೆಚ್.ಸಿ.ತಮ್ಮೇಶ್ ಗೌಡ, ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷ ಎಸ್.ಹರೀಶ್, ನಿವೃತ್ತ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ಉಪಸ್ಥಿತರಿದ್ದರು.
ಮುಖ್ಯಮಂತ್ರಿಗಳ ಪ್ರತಿಕ್ರಿಯೆ ಈ ವಿಚಾರ ರಾಷ್ಟ್ರಮಟ್ಟದಲ್ಲಿ ಚರ್ಚೆಗೆ ಕಾರಣವಾದ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದರು, “ಕೋಗಿಲು ಬಡಾವಣೆಯಲ್ಲಿ ಸರ್ಕಾರಿ ಜಾಗದಲ್ಲಿ ಅಕ್ರಮವಾಗಿ ಶೆಡ್ ಗಳನ್ನು ನಿರ್ಮಾಣ ಮಾಡಿದ್ದ ಸುಮಾರು 167 ಶೆಡ್ಗಳನ್ನು ಡಿಸೆಂಬರ್ 20ರಂದು ತೆರವುಗೊಳಿಸಲಾಗಿತ್ತು. ಸರ್ಕಾರದ ಜಾಗವಾಗಿದ್ದರಿಂದ ಅವರೆಲ್ಲರಿಗೂ ನೋಟಿಸ್ ನೀಡಿ, ತೆರವು ಮಾಡುವಂತೆ ಅವರ ಗಮನಕ್ಕೂ ತರಲಾಗಿತ್ತು, ಆದರೂ ಅವರು ಖಾಲಿ ಮಾಡಿರಲಿಲ್ಲ. ಅನಿವಾರ್ಯವಾಗಿ ತೆರವು ಮಾಡಲಾಗಿದೆ” ಎಂದು ಹೇಳಿದ್ದರು.
