Ashwaveega News 24×7 ಮಾರ್ಚ್ 18– 2026 : ಆನ್ಲೈನ್ ಡೆಲಿವರಿ ಕ್ಷೇತ್ರದಲ್ಲಿ ಹೆಸರು ಮಾಡಿರುವ ಬ್ಲಿಂಕ್ಇಟ್ ವಿರುದ್ಧ ಗಂಭೀರ ಆರೋಪಗಳು ಕೇಳಿಬಂದಿವೆ. ಗ್ರಾಹಕರಿಗೆ ಅವಧಿ ಮೀರಿದ ಆಹಾರ ಪದಾರ್ಥಗಳನ್ನು ವಿತರಿಸುತ್ತಿರುವ ಬಗ್ಗೆ ದೂರುಗಳು ಬಂದ ಹಿನ್ನೆಲೆಯಲ್ಲಿ ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ನಗರದಲ್ಲಿ ನಡೆದ ಈ ಪ್ರಕರಣದಲ್ಲಿ, ಗ್ರಾಹಕರ ದೂರಿನ ಮೇರೆಗೆ ಆಹಾರ ಇಲಾಖೆ ಅಧಿಕಾರಿಗಳು ಬ್ಲಿಂಕ್ಇಟ್ ವೇರ್ಹೌಸ್ ಮೇಲೆ ದಾಳಿ ನಡೆಸಿದರು. ಪರಿಶೀಲನೆ ವೇಳೆ ಹಲವಾರು ಅವಧಿ ಮುಗಿದ ಆಹಾರ ಪದಾರ್ಥಗಳು ಪತ್ತೆಯಾಗಿರುವುದು ಬೆಳಕಿಗೆ ಬಂದಿದೆ .
ಇದಕ್ಕೂ ಮೇಲಾಗಿಯೂ, ಅಗತ್ಯ ಪರವಾನಗಿ ಇಲ್ಲದೇವೇ ವೇರ್ಹೌಸ್ ಕಾರ್ಯಾಚರಣೆ ನಡೆಸುತ್ತಿದ್ದದ್ದು ಪತ್ತೆಯಾಗಿದೆ. ಕಳೆದ ಸುಮಾರು ಆರು ತಿಂಗಳಿಂದ ಲೈಸೆನ್ಸ್ ಇಲ್ಲದೇ ಕಾರ್ಯನಿರ್ವಹಿಸುತ್ತಿದ್ದುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ತಕ್ಷಣವೇ ವೇರ್ಹೌಸ್ಗೆ ಬೀಗ ಜಡಿದು, ಪ್ರಕರಣ ದಾಖಲಿಸಿದ್ದಾರೆ. ಈ ಘಟನೆ ಆನ್ಲೈನ್ ಆಹಾರ ವಿತರಣೆ ಸೇವೆಗಳ ಮೇಲಿನ ನಂಬಿಕೆಗೆ ಧಕ್ಕೆಯಾಗಿದೆ.
ಗ್ರಾಹಕರು ಆಹಾರ ಪದಾರ್ಥಗಳನ್ನು ಸ್ವೀಕರಿಸುವಾಗ ಅವುಗಳ ಅವಧಿ ಮತ್ತು ಗುಣಮಟ್ಟವನ್ನು ಪರಿಶೀಲಿಸಬೇಕು ಎಂದು ಅಧಿಕಾರಿಗಳು ಸಲಹೆ ನೀಡಿದ್ದಾರೆ.
