Ashwaveega News 24×7 ಫೆಬ್ರವರಿ 07 -2026 – ಬೆಂಗಳೂರು: ನಗರದಲ್ಲಿ ಕಿಲ್ಲರ್ BMTC ಬಸ್ಗಳ ಅಟ್ಟಹಾಸ ಮತ್ತೊಂದು ಜೀವ ಬಲಿ ಪಡೆದಿದೆ. ಮಹದೇವಪುರ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯ ಟಿನ್ ಫ್ಯಾಕ್ಟರಿ ಸಮೀಪ BMTC ಎಲೆಕ್ಟ್ರಿಕ್ ಬಸ್ ಡಿಕ್ಕಿಯಾಗಿ ಮಣಿಪುರ ಮೂಲದ ಯುವತಿ ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ.
ಮೃತ ಯುವತಿಯನ್ನು ಮಣಿಪುರ ಮೂಲದ 20 ವರ್ಷದ ಹನ್ನಾ ಇನಕಾ ಎಂದು ಗುರುತಿಸಲಾಗಿದೆ. ಹನ್ನಾ ಇನಕಾ ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗ ನಿರ್ವಹಿಸುತ್ತಿದ್ದು, ಬೈಕ್ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ .
ಪ್ರತ್ಯಕ್ಷದರ್ಶಿಗಳ ಪ್ರಕಾರ, ಟಿನ್ ಫ್ಯಾಕ್ಟರಿ ಬಳಿ BMTC ಎಲೆಕ್ಟ್ರಿಕ್ ಬಸ್ ಯುವತಿ ಸಾಗುತ್ತಿದ್ದ ಬೈಕ್ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ತೀವ್ರತೆಗೆ ಯುವತಿ ಬೈಕ್ನಿಂದ ಕೆಳಗೆ ಬಿದ್ದು ಸಮತೋಲನ ತಪ್ಪಿದ್ದು, ಬಸ್ನ ಹಿಂಬದಿ ಚಕ್ರದಡಿ ಸಿಲುಕಿದ್ದಾರೆ. ಪರಿಣಾಮವಾಗಿ ಯುವತಿಯ ತಲೆಯ ಮೇಲೆ ಬಸ್ ಚಕ್ರ ಹರಿದು ಸ್ಥಳದಲ್ಲೇ ದುರ್ಮರಣಕ್ಕೀಡಾಗಿದ್ದಾರೆ.
ಘಟನೆಯ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಮಹದೇವಪುರ ಸಂಚಾರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ನಗರದಲ್ಲಿ ಹೆಚ್ಚುತ್ತಿರುವ BMTC ಬಸ್ ಅಪಘಾತಗಳು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದ್ದು, ವಿಶೇಷವಾಗಿ ಎಲೆಕ್ಟ್ರಿಕ್ ಬಸ್ ಚಾಲನೆಯ ಬಗ್ಗೆ ಕಟ್ಟುನಿಟ್ಟಿನ ನಿಯಮಗಳು ಹಾಗೂ ನಿಗಾವಹಿಸುವ ಅಗತ್ಯವಿದೆ ಎಂಬ ಆಗ್ರಹ ಮತ್ತೆ ಕೇಳಿಬರುತ್ತಿದೆ.
