Ashwaveega News 24×7 ಏಪ್ರಿಲ್ 9 – 2026 : ದಾವಣಗೆರೆ ಮತ್ತು ಬಾಗಲಕೋಟೆ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಮತದಾನ ಚುರುಕುಗೊಂಡಿದೆ. ಮಧ್ಯಾಹ್ನ 12 ಗಂಟೆಯ ವೇಳೆಗೆ ಬಾಗಲಕೋಟೆಯಲ್ಲಿ ಶೇ. 35 ಹಾಗೂ ದಾವಣಗೆರೆಯಲ್ಲಿ ಶೇ. 27 ಮತದಾನ ದಾಖಲಾಗಿದೆ ಎಂದು ಅಂದಾಜಿಸಲಾಗಿದೆ.
ಅಶ್ವವೇಗ ನ್ಯೂಸ್ ಗ್ರೌಂಡ್ ರಿಪೋರ್ಟ್ ಪ್ರಕಾರ, ಎರಡೂ ಕ್ಷೇತ್ರಗಳಲ್ಲಿ ಮತದಾರರು ಸರತಿ ಸಾಲಿನಲ್ಲಿ ನಿಂತು ತಮ್ಮ ಹಕ್ಕು ಚಲಾಯಿಸುತ್ತಿದ್ದಾರೆ. ತೀವ್ರ ಬಿಸಿಲಿನ ನಡುವೆಯೂ ಮತದಾರರು ಮತಗಟ್ಟೆಗಳಿಗೆ ಆಗಮಿಸುತ್ತಿರುವುದು ಗಮನಾರ್ಹವಾಗಿದೆ.
ಬಾಗಲಕೋಟೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಉಮೇಶ್ ತಮ್ಮ ಮತ ಚಲಾಯಿಸಿದ್ದು, ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ಕೂಡ ಮತದಾನದಲ್ಲಿ ಭಾಗವಹಿಸಿದ್ದಾರೆ. ದಾವಣಗೆರೆಯಲ್ಲಿ ಸಾದಿಕ್ ಪೈಲ್ವಾನ್ ಮತದಾನ ಮಾಡಿದ್ದಾರೆ .
ಇದೇ ವೇಳೆ ದಾವಣಗೆರೆಯಲ್ಲಿ ಒಂದು ವಿಶೇಷ ಸಂಗತಿ ಗಮನಸೆಳೆದಿದೆ. ಪ್ರಮುಖ ಅಭ್ಯರ್ಥಿಗಳಾದ ಸಮರ್ಥ್ ಮತ್ತು ಶ್ರೀನಿವಾಸ್ ಅವರು ಉತ್ತರ ಕ್ಷೇತ್ರದ ಮತದಾರರಾಗಿರುವುದರಿಂದ, ದಕ್ಷಿಣ ಕ್ಷೇತ್ರದಲ್ಲಿ ನಡೆಯುತ್ತಿರುವ ಉಪಚುನಾವಣೆಯಲ್ಲಿ ಅವರಿಗೆ ಮತದಾನ ಹಕ್ಕು ಇಲ್ಲದಿರುವುದು ಚರ್ಚೆಗೆ ಗ್ರಾಸವಾಗಿದೆ .
ಒಟ್ಟಾರೆ, ಜಿದ್ದಾಜಿದ್ದಿನ ಈ ಕ್ಷೇತ್ರಗಳಲ್ಲಿ ಮತದಾನ ಪ್ರಮಾಣ ಕ್ರಮೇಣ ಏರಿಕೆಯಾಗುತ್ತಿದ್ದು, ಅಂತಿಮ ವೇಳೆಗೆ ಹೆಚ್ಚಿನ ಪ್ರಮಾಣದ ಮತದಾನ ನಿರೀಕ್ಷಿಸಲಾಗಿದೆ .
