Ashwaveega News 24×7 ಏಪ್ರಿಲ್ 4 – 2026 : ದೇಶಾದ್ಯಂತ ಸಿಮೆಂಟ್ ಬೆಲೆ ಏರಿಕೆಗೆ ಸಿದ್ಧತೆ ನಡೆದಿದ್ದು, ನಾಳೆಯಿಂದಲೇ ಸಿಮೆಂಟ್ ದರಗಳಲ್ಲಿ ಹೆಚ್ಚಳವಾಗುವ ಸಾಧ್ಯತೆ ಇದೆ. ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಉದ್ವಿಗ್ನ ಪರಿಸ್ಥಿತಿ ಪರಿಣಾಮವಾಗಿ ಭಾರತದಲ್ಲೂ ನಿರ್ಮಾಣ ಕ್ಷೇತ್ರಕ್ಕೆ ಹೊಡೆತ ಬೀಳುವ ಲಕ್ಷಣಗಳು ಕಾಣಿಸುತ್ತಿವೆ.
ಸಿಮೆಂಟ್ ತಯಾರಿಕಾ ಸಂಸ್ಥೆಗಳು ಒಂದು 50 ಕೆಜಿ ಮೂಟೆ ಮೇಲೆ ಸುಮಾರು ₹50ರವರೆಗೆ ದರ ಹೆಚ್ಚಳ ಮಾಡುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ವಿಶೇಷವಾಗಿ ದಕ್ಷಿಣ ಭಾರತದಲ್ಲಿ ಈ ಏರಿಕೆ ಹೆಚ್ಚು ಕಂಡುಬರುವ ಸಾಧ್ಯತೆ ಇದ್ದು, ಇತರ ಭಾಗಗಳಲ್ಲಿ ₹ 20 ರಿಂದ ₹ 30ರವರೆಗೆ ಏರಿಕೆಯಾಗುವ ಸಾಧ್ಯತೆ ಇದೆ.
ಪ್ರಸ್ತುತ ಮಾರುಕಟ್ಟೆಯಲ್ಲಿ 50 ಕೆಜಿ ಸಿಮೆಂಟ್ ಮೂಟೆಯ ಬೆಲೆ ₹300ರಿಂದ ₹500ರ ನಡುವೆ ಇದೆ. ಈ ದರ ಏರಿಕೆಯಿಂದ ಕಟ್ಟಡ ನಿರ್ಮಾಣ ವೆಚ್ಚ ಹೆಚ್ಚಾಗಲಿದ್ದು, ಮನೆ ನಿರ್ಮಾಣ, ರಿಯಲ್ ಎಸ್ಟೇಟ್ ಹಾಗೂ ಇತರೆ ಕಾಮಗಾರಿಗಳ ಮೇಲೆ ನೇರ ಪರಿಣಾಮ ಬೀರುವ ಸಾಧ್ಯತೆ ಇದೆ.
ಇಂಧನ ದರ ಹಾಗೂ ಪ್ಯಾಕೇಜಿಂಗ್ ವೆಚ್ಚಗಳಲ್ಲಿ ಗಣನೀಯ ಏರಿಕೆ ಕಂಡುಬಂದಿರುವುದು ಈ ನಿರ್ಧಾರಕ್ಕೆ ಪ್ರಮುಖ ಕಾರಣ ಎಂದು ಹೇಳಲಾಗುತ್ತಿದೆ. ಜೊತೆಗೆ, ಮಾರ್ಚ್ ತಿಂಗಳಲ್ಲಿ ಸಿಮೆಂಟ್ ಬೇಡಿಕೆ ಕುಸಿತ ಕಂಡಿದ್ದು, ಜೂನ್ ತ್ರೈಮಾಸಿಕದಲ್ಲೂ ಲಾಭಾಂಶ ಕಡಿಮೆಯಾಗುವ ಸಾಧ್ಯತೆ ಇದೆ ಎಂದು ಕಂಪನಿಗಳು ಅಂದಾಜಿಸಿವೆ .
ಈ ಹಿನ್ನೆಲೆಯಲ್ಲಿ ನಷ್ಟವನ್ನು ಸಮತೋಲನಗೊಳಿಸಲು ಸಿಮೆಂಟ್ ತಯಾರಕರು ಬೆಲೆ ಏರಿಕೆಗೆ ಮುಂದಾಗಿದ್ದಾರೆ .
