Ashwaveega News 24×7 ಫೆಬ್ರವರಿ 06 -2026 – ಬೆಂಗಳೂರು : ಚಲನಚಿತ್ರರಂಗ ಕುರಿತು ಚಂದ್ರಚೂಡ್ ನೀಡಿರುವ ಹೇಳಿಕೆಗಳಿಗೆ ಪ್ರತಿಕ್ರಿಯಿಸಿರುವ ನಿರ್ಮಾಪಕ ಕೆ. ಮಂಜು, ಏಕವಚನದಲ್ಲಿ ಟೀಕಿಸಿರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. “ಚಿತ್ರರಂಗದ ಬಗ್ಗೆ ಮಾತನಾಡುವಾಗ ಬಹಳ ಯೋಚಿಸಬೇಕು. ಚಿತ್ರರಂಗದ ಗೌರವ ಕಳೆಯುವ ಕೆಲಸ ಮಾಡಬಾರದು” ಎಂದು ಮಂಜು ಹೇಳಿದ್ದಾರೆ.
ಚಂದ್ರಚೂಡ್ ವಿರುದ್ಧ ಮಾನಹಾನಿ ಮೊಕದ್ದಮೆ ದಾಖಲಿಸುವುದಾಗಿ ಎಚ್ಚರಿಕೆ ನೀಡಿರುವ ಅವರು, “ಚಂದ್ರಚೂಡ್ ಕಥೆಗಳನ್ನ ನಿರ್ಮಾಪಕರು ತೆಗೆದುಕೊಳ್ಳಲ್ಲ. ಅವನ ಹಿಸ್ಟರಿ ಕೇಳಿದ್ರೆ ಎಲ್ಲರಿಗೂ ಅಸಹ್ಯ ಆಗುತ್ತೆ” ಎಂದು ಕಿಡಿಕಾರಿದ್ದಾರೆ.
“ನನ್ನ ಬಗ್ಗೆ ಅವನು ಏನು ಬೇಕಾದರೂ ಮಾಡಲಿ, ನಾನು ನೋಡುತ್ತೇನೆ. ಅವನಿಗೆ ದೊಡ್ಡವರ ಬಲ, ರೌಡಿಗಳ ಬಲ ಇರಬಹುದು, ಆದರೆ ನನಗೆ ಭಗವಂತನ ಬಲ ಇದೆ” ಎಂದು ಕೆ. ಮಂಜು ಹೇಳಿದ್ದಾರೆ. ಇನ್ನೂ, ಚಂದ್ರಚೂಡ್ ಯಾರ ಬಳಿ ಕೆಲಸ ಮಾಡುತ್ತಾನೋ, ಅವರಿಗೆ ಈ ಬಗ್ಗೆ ಮುಂಚಿತವಾಗಿಯೇ ಮಾಹಿತಿ ನೀಡಿದ್ದೇನೆ. “ಇವನು ನಿಮ್ಮ ಬಳಿ ಇದ್ದರೆ ತುಂಬಾ ಕಷ್ಟವಾಗುತ್ತದೆ ಎಂದು ತಿಳಿಸಿದ್ದೇನೆ” ಎಂದು ಮಂಜು ಸ್ಪಷ್ಟಪಡಿಸಿದ್ದಾರೆ.
ಈ ವಿವಾದ ಇದೀಗ ಚಿತ್ರರಂಗದಲ್ಲಿ ಚರ್ಚೆಗೆ ಗ್ರಾಸವಾಗಿದ್ದು, ಇಬ್ಬರ ನಡುವಿನ ಮಾತಿನ ಯುದ್ಧ ಮತ್ತಷ್ಟು ತೀವ್ರಗೊಳ್ಳುವ ಸೂಚನೆಗಳು ಕಾಣಿಸುತ್ತಿವೆ.
