
ತೈವಾನ್…ದಕ್ಷಿಣ ಚೈನಾ ಸಾಗರದಲ್ಲಿನ ಒಂದು ಪುಟ್ಟ ದ್ವೀಪ ರಾಷ್ಟ್ರ. ಚೈನಾದ ಪಕ್ಕದಲ್ಲೇ ಇರುವ ಈ ಪುಟ್ಟ ರಾಷ್ಟ್ರದ ಮೇಲೆ ಚೈನಾ ಸದಾಕಾಲ ಕಣ್ಣಿಟ್ಟುಕ್ಕೊಂಡೇ ಕೂತಿದೆ. ಅವಕಾಶ ಸಿಕ್ಕಾಗಲೆಲ್ಲಾ ನಾವು ತೈವಾನ್ʼನ್ನು ವಶಪಡಿಸಿಕೊಂಡೇ ತೀರುತ್ತೇವೆ ಎಂದು ಅಬ್ಬರಿಸುವ ಚೈನಾಕ್ಕೆ, ಈವರೆಗೂ ಅದೊಂದು ಕೆಲಸವನ್ನ ಮಾಡೋಕೆ ಸಾಧ್ಯವಾಗಿಲ್ಲ. ಕಾರಣ ತೈವಾನ್ʼಗಿರುವ ಅಮೆರಿಕದ ಬೆಂಬಲ..!
ತೈವಾನ್ ವಶಪಡಿಸಿಕೊಳ್ಳುವ ಚೈನಾ ಬಯಕೆಗೆ ಅಡ್ಡಗಾಲಾಗಿ ನಿಂತಿರೋದು ಇದೇ ಅಮೆರಿಕ. ಅಮೆರಿಕದ ಬೆಂಬಲವಿದೆ ಎನ್ನುವ ಏಕೈಕ ಕಾರಣಕ್ಕೆ, ತೈವಾನ್ ಇವತ್ತಿಗೂ ಸಾರ್ವಭೌಮ ರಾಷ್ಟ್ರವಾಗಿ ಉಳಿದಿದೆ. ಒಂದು ವೇಳೆ ತೈವಾನ್ʼಗೆ ಅಮೆರಿಕದ ಬೆಂಬಲವಿಲ್ಲದೇ ಹೊಗಿದ್ರೆ, ಈ ತೈವಾನ್ ಎಂಬ ಪುಟ್ಟ ದ್ವೀಪರಾಷ್ಟ್ರವನ್ನ, ಯಾವತ್ತಿಗೋ ಒಂದೇ ಏಟಿಗೆ ಬಡಿದು ಬಾಯಿಗೆ ಹಾಕಿಕೊಂಡು ಬಿಡ್ತಿತ್ತು ಚೈನಾ. ಆದರೆ ಚೈನಾದ ಈ ಎಲ್ಲಾ ಪ್ರಯತ್ನಕ್ಕೂ ಅಡ್ಡಗೋಡೆಯಾಗಿ ನಿಂತಿದ್ದು ಮಾತ್ರ ಅಮೆರಿಕ. ಹಾಗಾಗಿ ತೈವಾನ್ʼನ್ನು ವಶಕ್ಕೆ ಪಡೆಯಬೇಕು ಎನ್ನುವ ಚೈನಾದ ಮಹತ್ವಾಕಾಂಕ್ಷೆ ಈವರೆಗೂ ಈಡೇರಿಲ್ಲ. ಯಾವಾಗಲೆಲ್ಲ ಚೈನಾ ತೈವಾನ್ ವಿಷಯಕ್ಕೆ ಮೂಗುತೂರಿಸುತ್ತದೆಯೋ, ಆವಾಗಲೆಲ್ಲಅಮರಿಕ ಅದಕ್ಕೆ ಅಡ್ಡಗಾಲು ಹಾಕುತ್ತಲೇ ಬರುತ್ತಿದೆ..!
ಕೆಲವೇ ದಿನಗಳ ಹಿಂದೆ ಅಮೆರಿಕದ ರಕ್ಷಣಾ ಕಾರ್ಯದರ್ಶಿ ಜಪಾನ್ʼಗೆ ಭೇಟಿ ನೀಡಿದ್ದರು. ಟೋಕ್ಯೋದಲ್ಲಿ ಮಾತನಾಡುತ್ತಿದ್ದ Pete Hegseth ತೈವಾನ್ʼಗೆ ಯಾವತ್ತಿಗೂ ಬೆಂಬಲವಾಗಿ ನಿಲ್ಲಲಿದೆ. ಕೇವಲ ತೈವಾನ್ ಮಾತ್ರವಲ್ಲ, ಇಂಡೋ-ಫೆಸಿಫಿಕ್ ವಲಯದಲ್ಲಿನ ಸಮಗ್ರ ಶಾಂತಿ ಕಾಪಾಡಲು ಅಮೆರಿಕ ಯಾವತ್ತಿಗೂ ಬದ್ಧ ಎಂಬ ಹೇಳಿಕೆ ನೀಡಿದ್ದರು. ಇದು ಚೈನಾವನ್ನು ಕೆರಳಿ ಕೆಂಡವಾಗುವಂತೆ ಮಾಡಿತ್ತು. ಅಮೆರಿಕ ರಕ್ಷಣಾ ಕಾರ್ಯದರ್ಶಿ ಈ ಹೇಳಿಕೆ ನೀಡಿದ ಎರಡೇ ಎರಡು ದಿನಕ್ಕೆ, ಚೈನಾ ತೈವಾನ್ ಜಲಗಡಿಯ ಸಮೀಪ ಸಮರಾಭ್ಯಾಸವನ್ನು ನಡೆಸಿತ್ತು. ಈ ಸಮರಾಭ್ಯಾದಲ್ಲಿ, ಚೈನಾದ ಅತ್ಯಾಧುನಿಕ ಯುದ್ಧ ವಿಮಾನಗಳು ಹಾಗೂ ಯುದ್ಧ ನೌಕೆಗಳು ಭಾಗವಹಿಸಿದ್ದವು. ನಮ್ಮ ನಿರ್ದಿಷ್ಟ ಗುರಿಗಳನ್ನು ನಾಶಪಡಿಸುವ ನಮ್ಮ ನಿಖರತೆಯನ್ನು ಖಚಿತಪಡಿಸಿಕೊಳ್ಳುವುದು ಈ ಸಮರಾಭ್ಯಾಸದ ಉದ್ದೇಶ ಎಂದು ಚೈನಾದ PLA ತಿಳಿಸಿತ್ತು. ತೈವಾನ್ ಅಧ್ಯಕ್ಷ ಚೈನಾವನ್ನು ಬಾಹ್ಯ ಶತ್ರು ಎಂಬರ್ಥದ ಹೇಳಿಕೆ ನೀಡಿದ ಕೆಲವೇ ದಿನಗಳಲ್ಲಿ ಚೈನಾದ ಈ ಸಮಾರಾಭ್ಯಾಸ ಆರಂಭವಾಗಿತ್ತು ಎನ್ನುವುದು ಗಮನಿಸಬೇಕಾದ ವಿಷಯ..!
ಚೈನಾದ ಈ ಅತಿರೇಕದ ನಡೆ ಕೇವಲ ತೈವಾನ್ʼಗಷ್ಟೇ ಸೀಮಿತವಾಗಿಲ್ಲ. ಇಡೀ ದಕ್ಷಿಣ ಚೈನಾ ಸಮುದ್ರವೇ ತನಗೆ ಸೇರಿದ್ದು ಎಂದು ಚೈನಾ ವಾದಿಸುತ್ತದೆ. ಇದಕ್ಕೆ ಕಾರಣ ದಕ್ಷಿಣ ಚೈನಾ ಸಮುದ್ರದಲ್ಲಿನ ಅಪಾರ ತೈಲ ಸಂಪತ್ತು ಹಾಗೂ ನೈಸರ್ಗಿಕ ಅನಿಲ. ಯಾವಾಗ ಈ ಸಾಗರ ತನ್ನೊಡಲಲ್ಲಿ ಅಪಾರ ಪ್ರಮಾಣದ ಸಂಪತ್ತನ್ನು ಹುದುಗಿಸಿಟ್ಟುಕೊಂಡಿದೆ ಎಂಬ ವಿಷಯ ಡ್ರ್ಯಾಗನ್ ಚೈನಾಗೆ ತಿಳಿಯಿತೋ, ಅವತ್ತಿನಿಂದಲೇ ಇಡೀ ದಕ್ಷಿಣ ಚೈನಾ ಸಾಗರವೇ ತನ್ನದು ಎಂದು ವಾದಿಸೋಕೆ ಶುರುಮಾಡಿತ್ತು ಚೈನಾ. ಇದರ ಮುಂದುವರೆದ ಭಾಗವಾಗಿ, ಈಗಾಗಲೇ ದಕ್ಷಿಣ ಚೈನಾ ಸಾಗರದ ಭಾಗದಲ್ಲಿ ಹಲವು ಕೃತಕ ದ್ವೀಪಗಳನ್ನ ನಿರ್ಮಿಸಿರುವ ಚೈನಾ, ಅಲ್ಲಿ ಈಗಾಗಲೇ ಕ್ಷಿಪಣಿಗಳ ನಿಯೋಜನೆಯನ್ನೂ ಮಾಡಿದೆ. ಆ ಮೂಲಕ ಇಡೀ ದಕ್ಷಿಣ ಚೈನಾ ಸಾಗರದ ಮೇಲೆ ಹಕ್ಕು ಸಾಧಿಸಲು ಪ್ರಯತ್ನಿಸುತ್ತಿದೆ..!
ಈ ದಕ್ಷಿಣ ಚೈನಾ ಸಾಗರ ಒಂದು ಪ್ರಮುಖ ಅಂತಾರಾಷ್ಟ್ರೀಯ ಮಾರ್ಗವಾಗಿರೋದ್ರಿಂದ, ಈ ಪ್ರದೇಶ ಸಂಘರ್ಷ ಮುಕ್ತವಾಗಿರಬೇಕು ಎಂದು ಅಮೆರಿಕ ಬಯಸುತ್ತದೆ, ಹಾಗಾಗಿ ತೈವಾನ್ ವಿಷಯದಲ್ಲಿ ಚೈನಾ ಆಕ್ರಾಮಕ ವರ್ತನೆ ತೋರಿದಾಗಲೆಲ್ಲ, ಅಮೆರಿಕದ ಯುದ್ಧ ನೌಕೆಗಳು ಈ ಭಾಗದಲ್ಲಿ ಪ್ರತ್ಯಕ್ಷವಾಗುತ್ತವೆ. ಇಡಿಯ ದಕ್ಷಿಣ ಚೈನಾ ಸಮುದ್ರವೇ ತನ್ನದು ಎನ್ನುವ ಚೈನಾಗೆ, ಇದೊಂದು ಅಂತಾರಾಷ್ಟ್ರೀಯ ಮುಕ್ತ ವ್ಯಾಪಾರೀ ಮಾರ್ಗ ಎಂದು ಅಮೆರಿಕ ಉತ್ತರಿಸುತ್ತದೆ. ಇದು ಆ ಭಾಗದಲ್ಲಿ ಪದೇ ಪದೇ ಅಮೆರಿಕ-ಚೈನಾ ಘರ್ಷಣೆಗೆ ಕಾರಣವಾಗುತ್ತದೆ. ಕೇವಲ ತೈವಾನ್ ವಿಷಯ ಮಾತ್ರವಲ್ಲ, ದಕ್ಷಿಣ ಚೈನಾ ಸಾಗರ ವಲಯದ ಯಾವ ದೇಶದೊಟ್ಟಿಗೂ ಚೈನಾ ಒಳ್ಳೆಯ ಸಂಬಂಧಗಳನ್ನು ಹೊಂದಿಲ್ಲ. ಈ ಸಾಗರದ ಸುತ್ತಲೂ ಫಿಲಿಪೈನ್ಸ್, ತೈವಾನ್, ಇಂಡೋನೇಷ್ಯಾ, ಥೈಲ್ಯಾಂಡ್, ವಿಯೆಟ್ನಾಂ ಹೀಗೆ ಹಲವು ದೇಶಗಳಿವೆ. ಈ ದೇಶಗಳು ದಕ್ಷಿಣ ಚೈನಾ ಸಾಗರದ ಕೆಲವು ಭಾಗಗಳು ತಮಗೂ ಸೇರಿದ್ದು ಎಂದು ವಾದಿಸುತ್ತವೆ, ಆದರೆ ಈಗಾಗಲೇ ಒಂದು ಪ್ರಬಲ ಸೇನಾ ಶಕ್ತಿಯಾಗಿ ಬೆಳೆದಿರುವ ಚೈನಾ, ಈ ದೇಶಗಳ ಬಗ್ಗೆ ಕ್ಯಾರೆ ಎನ್ನುತ್ತಿಲ್ಲ. ತನ್ನ ಹಿತಾಸಕ್ತಿಗಳ ವಿರುದ್ಧ ವರ್ತಿಸುವ ಯಾವುದೇ ದೇಶಕ್ಕೆ ಸೇನಾ ಕಾರ್ಯಾಚರಣೆಯ ಬೆದರಿಕೆಯನ್ನೂ ಒಡ್ಡುತ್ತದೆ ಡ್ರ್ಯಾಗನ್ ಚೈನಾ. ಈ ದೇಶಗಳ ಜಲಗಡಿ ಹಾಗೂ ವಾಯಗಡಿಯನ್ನು ಚೈನಾದ PLA ಉಲ್ಲಂಘಿಸೋದು ಈಗ ಮಾಮೂಲು ಎಂಬಂತಾಗಿದೆ..!

ಯಾವಾಗ, ದಕ್ಷಿಣ ಚೈನಾ ಸಾಗರದ ತಟದಲ್ಲಿನ ದೇಶಗಳಿಗೆ ಚೈನಾ ಬಹಿರಂಗವಾಗಿ ಬೆದರಿಕೆ ಒಡ್ಡತೊಡಗಿತೋ, ಆಗ ಅನಿವಾರ್ಯವಾಗಿ ಈ ದೇಶಗಳು ಅಮೆರಿಕದ ಮೊರೆ ಹೋದವು. ಇದು ಅಮೆರಿಕಕ್ಕೆ, ಈ ಭಾಗದಲ್ಲಿ ನಿರಾಯಾಸವಾಗಿ ಒಂದು ಅವಕಾಶದ ಬಾಗಿಲನ್ನು ತೆರೆಯಿತು. ಅದರ ಫಲವಾಗಿ ಈಗ ತೈವಾನ್, ಫಿಲಿಪೈನ್ಸ್ ಮುಂತಾದ ದೇಶಗಳು ಅಮೆರಿಕ ಬೆಂಬಲಿತ ದೇಶಗಳಾಗಿ ಗುರುತಿಸಿಕೊಂಡಿವೆ. ಚೈನಾ ವಿರೋಧಿಸುವ ಅಮೆರಿಕದ ಕಾರ್ಯತಂತ್ರದ ಭಾಗವಾಗೇ ಫಿಲಿಪೈನ್ಸ್ಗೆ 20 F-16 ಯುದ್ಧ ವಿಮಾನಗಳನ್ನು ಮಾರಾಟಕ್ಕೆ ಅಮೆರಿಕ ಒಪ್ಪಿಗೆ ನೀಡಿದೆ. ಇದೇ ರೀತಿ ತೈವಾನ್ʼನನ್ನೂ ಕೂಡ ಮೊದಲಿನಿಂದಲೂ ಬೆಂಬಲಿಸುತ್ತಿದೆ ಅಮೆರಿಕ. ಹಾಗಾಗಿ ಚೈನಾಕ್ಕೆ ಇವತ್ತಿನವರೆಗೂ ತೈವಾನ್ ವಶಪಡಿಸಿಕೊಳ್ಳುವುದು ಸಾಧ್ಯವಾಗಿಲ್ಲ. ತೈವಾನ್ ವಿಷಯದಲ್ಲಿ ಎಷ್ಟೇ ಆಕ್ರಾಮಕವಾಗಿ ವರ್ತಿಸಿದರೂ, ಅಮೆರಿಕದ ವಿರುದ್ಧ ಸೆಣೆಸಾಡಿ ತೈವಾನ್ ವಶಪಡಿಸಿಕೊಳ್ಳೋದು ಚೈನಾಗೆ ಸುಲಭವಿಲ್ಲ. ಕಾರಣ ತನ್ನ ಮಿತ್ರರಾಷ್ಟ್ರದ ರಕ್ಷಣೆಗೆ ಅಮರಿಕ ಯಾವ ಹಂತಕ್ಕೂ ಹೋಗಬಲ್ಲದು ಎಂಬ ಒಂದು ಸಣ್ಣ ಅಳುಕು ಚೈನಾಗೆ ಇದ್ದೇ ಇದೆ..!
ತೈವಾನ್ ಮೇಲೆ ಚೈನಾದ ಕಣ್ಣು ಬೀಳೋಕೆ ಪ್ರಮುಖ ಕಾರಣ, ತೈವಾನ್ ಸೆಮಿಕಂಡಕ್ಟರ್ ಉತ್ಪಾದನೆಯ ದೈತ್ಯ ರಾಷ್ಟ್ರ ಅನ್ನೋದು. ಇವತ್ತು ಜಗತ್ತಿನ ಸುಮಾರು 60% ಕ್ಕೂ ಹೆಚ್ಚು ಸೆಮಿಕಂಡಕ್ಟರ್ʼಗಳು ಹಾಗೂ 90% ಕ್ಕೂ ಹೆಚು ಅತ್ಯಾಧುನಿಕ ಚಿಪ್ʼಗಳು ತೈವಾನ್ʼನಲ್ಲಿ ಉತ್ಪಾದನೆಯಾಗುತ್ತವೆ. ತೈವಾನ್ʼನ್ನು ವಶಪಡಿಸಿಕೊಂಡಲ್ಲಿ ತಾನು ಸೆಮಿಕಂಡಕ್ಟರ್ ಉದ್ಯಮದ ಏಕಮೇವಾದ್ವಿತೀಯ ನಾಯಕನಾನಿ ಬೆಳೆಯಬಹುದು ಎನ್ನುವುದು ಚೈನಾದ ದುರಾಲೋಚನೆ. ಯಾಕಂದ್ರೆ, ಈ ಸೆಮಿಕಂಡಕ್ಟರ್ ಅನ್ನೋದು ಇವತ್ತು ಅನೇಕ ರೀತಿಯ ವಸ್ತುಗಳ ಉತ್ಪಾದನೆಯಲ್ಲಿ ಅತ್ಯಾವಶ್ಯಕವಾಗಿ ಬೇಕಾಗಿರುವ ವಸ್ತು. ಅದಕ್ಕಾಗಿ ಸೆಮಿಕಂಡಕ್ಟರ್ʼಗೆ ಇವತ್ತು ಜಾಗತಿಕ ಬೇಡಿಕೆ ಹೆಚ್ಚಾಗಿದೆ. ಚೈನಾದ ಕಣ್ಣು ತೈವಾನ್ ಮೇಲೆ ಬೀಳುವುದಕ್ಕೆ ಇದೇ ಕಾರಣ. ಆದರೆ ತೈವಾನ್ʼನ್ನು ಅಷ್ಟು ಸುಲಭವಾಗಿ ಬಿಟ್ಟುಕೊಡುವುದಿಲ್ಲ ಅಮೆರಿಕ. ತೈವಾನ್ʼನಲ್ಲಿ ಅಮೆರಿಕದ ಹೂಡಿಕೆಗಳಿವೆ. ಈ ಕಾರಣಕ್ಕೆ ತೈವಾನ್ ವಿಷಯದಲ್ಲಿ ಚೈನಾ-ಅಮೆರಿಕ ಸಂಘರ್ಷ ನಡೆದರೂ ಅಚ್ಚರಿಯಿಲ್ಲ..!
ಚೈನಾದ ವರ್ತನೆ ಮೊದಲಿನಿಂದಲೂ ಇಷ್ಟು ಆಕ್ರಾಮಕವಾಗೇನೂ ಇರಲಿಲ್ಲ. ಆದರೆ, ಯಾವಾಗ ಕ್ಸಿ ಜಿನ್ʼಪಿಂಗ್ ಎಂಬ ಮಹಾತ್ವಾಕಾಕ್ಷೆಯ ಕಮ್ಯೂನಿಸ್ಟ್ ನಾಯಕ ಚೈನಾದ ಅಧ್ಯಕ್ಷರಾಗಿ ಆಯ್ಕೆಗೊಂಡರೋ, ಅಲ್ಲಿಂದ ಚೈನಾದ ವರ್ತನೆಯಲ್ಲಿ ಮಹತ್ತರ ಬದಲಾವಣೆಯಾಯಿತು. ಹಲವು ವಿಷಯಗಳಲ್ಲಿ ಚೈನಾ ಆಕ್ರಾಮಕ ವರ್ತನೆ ತೋರತೊಡಗಿತು. ಕ್ಸಿ ಅಧಿಕಾರಾವಧಿಯಲ್ಲಿಯೇ ಭಾರತ ಹಾಗೂ ಚೈನಾದ ವಿರುದ್ಧ, ತವಾನ್ ಹಾಗೂ ಗಲ್ವಾನ್ ಘರ್ಷಣೆ ನಡೆದಿರುವುದು ಎನ್ನುವದು ಗಮನಿಸಬೇಕಾದ ಅಂಶ. ಈ ಕ್ಸಿ ಜಿನ್ʼಪಿಂಗ್ ಮಾವೋ ಜೆಡಾಂಗ್ ನಂತರ ಚೈನಾ ಕಂಡಿರುವ ಅತ್ಯಂತ ಪ್ರಬಲ ನಾಯಕ. ಚೈನಾದ ಸೇನಾಶಕ್ತಿ ಅಮೆರಿಕಕ್ಕೆ ಸರಿಸಮಾನವಾಗಿ ಬೆಳೆಯಬೇಕು, ಅಮೆರಿಕದ ದೊಡ್ಡಣ್ಣನ ಸ್ಥಾನವನ್ನ ಚೈನಾ ಅಲಂಕರಿಸಬೇಕು ಎನ್ನುವ ಮಹತ್ವಾಕಾಂಕ್ಷೆಯ ನಾಯಕ ಕ್ಸಿ ಜಿನ್ʼಪಿಂಗ್. ಆ ಗುರಿ ಸಾಧನೆಗೋಸ್ಕರ ತನ್ನ ಅಧಿಕಾರಾವಧಿಯ ಆರಂಭದಿಂದಲೂ ಪ್ರಯತ್ನಿಸುತ್ತಿದ್ದಾರೆ ಜಿನ್ʼಪಿಂಗ್. ಇದೇ ಕಾರಣಕ್ಕೆ ದಕ್ಷಿಣ ಚೈನಾ ಸಾಗರ ರಣಾಂಗಣವಾಗಿ ಬದಲಾಗುತ್ತಿದೆ. ಎರಡು ಜಾಗತಿಕ ಶಕ್ತಿಗಳ, ಶಕ್ತಿ ಪ್ರದರ್ಶನಕ್ಕೆ ವೇದಿಕೆಯಾಗಿ ಬಳಕೆಯಾಗ್ತಿದೆ. ಈ ಪ್ರತಿಷ್ಠೆಯ ಕದನ ಮುಂದಿನ ದಿನಗಳಲ್ಲಿ ಯಾವ ತಿರುವು ಪಡೆಯಲಿದೆ ಅನ್ನೋದನ್ನ, ಈಗಲೇ ಹೇಳುವುದು ಸಾಧ್ಯವಿಲ್ಲ..!