Ashwaveega News 24×7 ಜನವರಿ 20 – ಬೆಂಗಳೂರು/ದಿಲ್ಲಿ – ರಾಜ್ಯ ರಾಜಕಾರಣದಲ್ಲಿ ಬಹು ಚರ್ಚಿತವಾಗಿರುವ “ಕುರ್ಚಿ” ಕಿತ್ತಾಟ ಇದೀಗ ಕ್ಲೈಮ್ಯಾಕ್ಸ್ ಹಂತಕ್ಕೆ ತಲುಪುವ ಸೂಚನೆ ನೀಡುತ್ತಿದೆ. ಡೆಪ್ಯುಟಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ದಿಲ್ಲಿ ಪ್ರವಾಸದ ಬೆನ್ನಲ್ಲೇ, ಅವರ ಆಪ್ತ ವಲಯ ಫುಲ್ ಅಲರ್ಟ್ ಮೋಡ್ಗೆ ಹೋಗಿದ್ದು, ಹೈಕಮಾಂಡ್ಗೆ ಸ್ಪಷ್ಟ “ಸಂದೇಶ” ರವಾನಿಸಲು ಸಭೆಗಳ ಪ್ಲಾನ್ ರೂಪುಗೊಂಡಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಅಧಿವೇಶನಕ್ಕೆ ಮುನ್ನಾ ದಿನವೇ ಬೆಂಬಲಿಗ ಶಾಸಕರ ಸಭೆ ನಡೆಸಲು ತಯಾರಿ ನಡೆದಿದ್ದು, ಸುಮಾರು 40 ಶಾಸಕರ ನಡೆ ರಾಜಕೀಯ ವಲಯದಲ್ಲಿ ಭಾರೀ ಕುತೂಹಲ ಮೂಡಿಸಿದೆ. ಎರಡುವರೆ ವರ್ಷ ಕಳೆದರೂ ಅಧಿಕಾರ ಹಂಚಿಕೆ ಆಗಿಲ್ಲ ಎಂಬ ಅಸಮಾಧಾನ ಇದೀಗ ಬಹಿರಂಗವಾಗಿ ಹೊರಬರುತ್ತಿದೆ ಎನ್ನಲಾಗುತ್ತಿದೆ.
ಅಧಿಕಾರ ಹಸ್ತಾಂತರ ವಿಚಾರದಲ್ಲಿ ವರಿಷ್ಠ ನಾಯಕರ ಮೇಲೆ ಒತ್ತಡ ಹೇರುವ ತಂತ್ರ ರೂಪುಗೊಂಡಿದ್ದು, ಡಿಕೆಶಿಗೆ ಮುಖ್ಯಮಂತ್ರಿ ಸ್ಥಾನ ನೀಡಬೇಕೆಂಬ ಒತ್ತಡವನ್ನು ಬೆಂಬಲಿಗರು ಮುಂದಿಡಲು ಮುಂದಾಗಿದ್ದಾರೆ. ಸಿಎಂ ಬದಲಾವಣೆ ನಿಟ್ಟಿನಲ್ಲಿ ಡಿಕೆಶಿ ಬೆಂಬಲಿಗ ಶಾಸಕರಿಂದ ಸಭೆ ನಡೆಸುವ ಮೂಲಕ ಹೈಕಮಾಂಡ್ ಗಮನ ಸೆಳೆಯುವ ಯತ್ನ ನಡೆಯುತ್ತಿದೆ.
ಇದಾದರೂ ಪವರ್ ಫೈಟ್ ವಿಚಾರದಲ್ಲಿ ಹೈಕಮಾಂಡ್ ಸದ್ಯಕ್ಕೆ ಸೈಲೆಂಟ್ ಆಗಿದ್ದು, ದಿಲ್ಲಿ ನಾಯಕರು ಯಾವುದೇ ಸ್ಪಷ್ಟ ನಿರ್ಧಾರ ಕೈಗೊಂಡಿಲ್ಲ. ಈ ಮಧ್ಯೆ ಮುಖ್ಯಮಂತ್ರಿ “ಕುರ್ಚಿ” ಕನಸು ಡಿಕೆಶಿಯಿಂದ ದೂರವಾಗ್ತಿದೆಯೇ ಎಂಬ ಪ್ರಶ್ನೆಯೂ ರಾಜಕೀಯ ವಲಯದಲ್ಲಿ ಚರ್ಚೆಗೆ ಬಂದಿದೆ.
ಪಕ್ಷ ಸಂಘಟನೆಗೆ ಶ್ರಮಿಸಿದಕ್ಕೆ ತಕ್ಕ ಫಲ ಬೇಕೆಂದು ಡಿಸಿಎಂ ಡಿ.ಕೆ. ಶಿವಕುಮಾರ್ ಆಗ್ರಹಿಸುತ್ತಿದ್ದಾರೆ ಎಂಬ ಮಾತುಗಳು ಜೋರಾಗಿವೆ. ಇದೇ ಕಾರಣಕ್ಕೆ ಕೊನೆ ಹಂತದ ರಣತಂತ್ರ ಪ್ರಯೋಗಿಸಲು ಆಪ್ತರು ಮುಂದಾಗಿದ್ದು, ಅಧಿವೇಶನ ಸಮಯದಲ್ಲೇ ರಾಜಕೀಯ ತಾಪಮಾನ ಇನ್ನಷ್ಟು ಏರಲಿದೆ ಎಂಬ ಅಂದಾಜು ವ್ಯಕ್ತವಾಗಿದೆ.
