Ashwaveega News 24×7 ಜನವರಿ 20 -ಮೈಸೂರು : ವರುಣಾ ವಿಧಾನಸಭಾ ಕ್ಷೇತ್ರಕ್ಕೆ ಏಕಾಏಕಿ ಭರ್ಜರಿ ಅನುದಾನ ಘೋಷಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಡೆ ರಾಜ್ಯ ರಾಜಕೀಯದಲ್ಲಿ ಬಿಸಿಬಿಸಿ ಚರ್ಚೆಗೆ ಕಾರಣವಾಗಿದೆ. ಬಜೆಟ್ಗೆ ಮುನ್ನವೇ ವರುಣಾ ಕ್ಷೇತ್ರಕ್ಕೆ ಸುಮಾರು 320 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಿರುವುದು ಹಲವು ಅನುಮಾನಗಳು, ಊಹಾಪೋಹಗಳಿಗೆ ದಾರಿ ಮಾಡಿಕೊಟ್ಟಿದೆ.
ಮೂಲಸೌಕರ್ಯ, ನಗರಾಭಿವೃದ್ಧಿ, ಆರೋಗ್ಯ ಸೇರಿದಂತೆ ವಿವಿಧ ಕ್ಷೇತ್ರಗಳ ಅಭಿವೃದ್ಧಿಗೆ ಈ ಅನುದಾನವನ್ನು ಮಂಜೂರು ಮಾಡಲಾಗಿದೆ. ವರುಣಾ ಕ್ಷೇತ್ರದೊಂದಿಗೆ ತಮ್ಮ ಭಾವನಾತ್ಮಕ ಸಂಬಂಧವನ್ನು ಸಿಎಂ ಸಿದ್ದರಾಮಯ್ಯ ಮತ್ತೆ ಒತ್ತಿ ಹೇಳುತ್ತಿದ್ದು, ದೂರದೃಷ್ಟಿಯ ಅಭಿವೃದ್ಧಿ ಯೋಜನೆಗಳ ಭಾಗವಾಗಿ ಅನುದಾನ ನೀಡಲಾಗಿದೆ ಎಂಬ ವಾದವೂ ಮುಂದಿಟ್ಟಿದ್ದಾರೆ.
ಆದರೆ ಇದೇ ಸಮಯದಲ್ಲಿ ರಾಜ್ಯ ರಾಜಕೀಯದಲ್ಲಿ ನಾಯಕತ್ವ ಬದಲಾವಣೆ ಕುರಿತು ಮಾತುಗಳು ಕೇಳಿಬರುತ್ತಿರುವುದು, ಈ ಅನುದಾನಕ್ಕೆ ಮತ್ತಷ್ಟು ರಾಜಕೀಯ ಅರ್ಥ ನೀಡುತ್ತಿದೆ. “ಇದು ವಿದಾಯದ ಉಡುಗೊರೆಯೇ?” ಅಥವಾ “ಮುಂದಿನ ಪೀಳಿಗೆ ನಾಯಕತ್ವಕ್ಕಾಗಿ ರೂಪಿಸಿದ ತಂತ್ರವೇ?” ಎಂಬ ಪ್ರಶ್ನೆಗಳು ಎದ್ದಿವೆ.
ವರುಣಾ ಕ್ಷೇತ್ರವನ್ನು ಸಿಎಂ ಆಗುವ ಸಲುವಾಗಿ ತಮ್ಮ ಪುತ್ರ ಯತೀಂದ್ರ ಸಿದ್ದರಾಮಯ್ಯ ಅವರು ಹಿಂದೆ ತ್ಯಾಗ ಮಾಡಿದ್ದರು. ಇದೀಗ ಮುಂದಿನ ಚುನಾವಣೆಯಲ್ಲಿ ಸಿದ್ದರಾಮಯ್ಯ ಸ್ಪರ್ಧಿಸುವುದು ಡೌಟ್ ಎನ್ನಲಾಗುತ್ತಿದ್ದು, ಹೀಗಾಗಿ ಯತೀಂದ್ರಗಾಗಿ ವರುಣಾ ಕ್ಷೇತ್ರವನ್ನು ಬಲವಾಗಿ ಉಳಿಸಿಕೊಳ್ಳಲು ಈ ಅನುದಾನ ಪ್ಲಾನ್ ರೂಪಿಸಲಾಗಿದೆ ಎಂಬ ಚರ್ಚೆಯೂ ರಾಜಕೀಯ ವಲಯದಲ್ಲಿ ಜೋರಾಗಿದೆ.
ವರುಣಾದಿಂದ ತಮ್ಮ ಮುಂದಿನ ಪೀಳಿಗೆಯ ನಾಯಕತ್ವವನ್ನು ಕಟ್ಟುವ ಉದ್ದೇಶ ಇದೆಯೇ ? ಅಥವಾ ಕ್ಷೇತ್ರದ ಮೇಲಿನ ಅಭಿಮಾನದಿಂದಲೇ ಸಿಎಂ ಈ ನಿರ್ಧಾರ ತೆಗೆದುಕೊಂಡರೇ ಎಂಬ ಪ್ರಶ್ನೆಗಳಿಗೆ ಸ್ಪಷ್ಟ ಉತ್ತರ ಇನ್ನೂ ಸಿಕ್ಕಿಲ್ಲ. ಆದರೆ ವರುಣಾ ಕ್ಷೇತ್ರಕ್ಕೆ ನೀಡಿರುವ ಈ ಬಂಪರ್ ಅನುದಾನವು ರಾಜ್ಯ ರಾಜಕೀಯದಲ್ಲಿ ಹಲವು ರೀತಿಯ ಚರ್ಚೆಗೆ ಕಾರಣವಾಗಿರುವುದು ಮಾತ್ರ ನಿಶ್ಚಿತ.
ಒಟ್ಟಾರೆ, ಸಿಎಂ ಸಿದ್ದರಾಮಯ್ಯ ಅವರ ವರುಣಾ ನಡೆ ರಾಜಕೀಯ ಲೆಕ್ಕಾಚಾರವೋ, ಭಾವನಾತ್ಮಕ ನಿರ್ಧಾರವೋ ಎಂಬುದು ಮುಂದಿನ ದಿನಗಳಲ್ಲಿ ಸ್ಪಷ್ಟವಾಗಲಿದೆ.
