ಬೆಂಗಳೂರು : ಪ್ರಹ್ಲಾದ್ ಜೋಶಿ ರಾಜೀನಾಮೆ ಕೇಳಿ ಕಾಂಗ್ರೆಸ್ಸಿಗರು ವಿಘ್ನ ಸಂತೋಷ ಪಡಲು ಮುಂದಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದು, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸಹೋದರ ಗೋಪಾಲ ಜೋಶಿಯಿಂದ ಟಿಕೆಟ್ ಕೊಡಿಸುವುದಾಗಿ ಹಣ ಪಡೆದಿದ್ದಾರೆ. ಎಂಬ ಆರೋಪದ ಮೇಲೆ ಪ್ರಹ್ಲಾದ್ ಜೋಶಿಯವರ ರಾಜೀನಾಮೆಗೆ ಕಾಂಗ್ರೆಸ್ ಒತ್ತಾಯಿಸಿದೆ ಎನ್ನುವ ಕುರಿತು ತಮ್ಮ ಎಕ್ಸ್ ಖಾತೆಯಲ್ಲಿ ಜೋಶಿ ಪರ ಬ್ಯಾಟಿಂಗ್ ಮಾಡಿದ್ದಾರೆ. ರಾಜೀನಾಮೆ ಕೇಳಿದ್ದ ಸಚಿವ ದಿನೇಶ್ ಗುಂಡೂರಾವ್ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ಕಿಡಿಕಾರಿದ್ದಾರೆ.
ಕೇಂದ್ರ ಸಚಿವರಾದ ಮಾನ್ಯ ಪ್ರಹ್ಲಾದ್ ಜೋಶಿ ಅವರ ಹೆಸರನ್ನು ಸಂಬಂಧಪಡದ ಪ್ರಕರಣವೊಂದರಲ್ಲಿ ಎಳೆದು ತರುವ ಮೂಲಕ ಕಾಂಗ್ರೆಸ್ಸಿಗರು ವಿಘ್ನ ಸಂತೋಷ ಪಡಲು ಹೊರಟಿದ್ದಾರೆ. ಸಚಿವ ದಿನೇಶ್ ಗೂಂಡುರಾವ್ ಅವರು ಅಸಂಬದ್ಧವಾಗಿ ಜೋಶಿಯವರ ರಾಜೀನಾಮೆಗೆ ಒತ್ತಾಯಿಸಿದ್ದಾರೆ.
ಆರೋಪಿತ ಗೋಪಾಲ ಜೋಷಿ ಅವರೊಂದಿಗೆ ಕಳೆದ 32 ವರ್ಷಗಳಿಂದಲೂ ಸಂಪರ್ಕ ಕಡಿದುಕೊಂಡು ಯಾರೊಂದಿಗೂ ತಮ್ಮ ಸಂಬಂಧ ಬೆರೆಸದಂತೆ ಮಾನ್ಯ ಪ್ರಹ್ಲಾದ್ ಜೋಶಿ ಅವರು ನ್ಯಾಯಾಲಯದಲ್ಲಿ 2013ರಲ್ಲೇ ತಡೆಯಾಜ್ಞೆ ತಂದಿದ್ದಾರೆ. ಅಲ್ಲದೇ ನ್ಯಾಯಾಲಯಕ್ಕೆ ಸಲ್ಲಿಸಿರುವ ಪ್ರಮಾಣ ಪತ್ರದಲ್ಲಿ ಅದರ ವಿವರವಿರುವುದಾಗಿಯೂ ಸ್ಪಷ್ಟಪಡಿಸಿದ್ದಾರೆ.