Ashwaveega News 24×7 ಏಪ್ರಿಲ್ 1 – 2026 : ಬೆಂಗಳೂರು : ಇಂದಿನಿಂದ ಸಾಮಾನ್ಯ ಜನರ ಜೀವನ ಮತ್ತಷ್ಟು ದುಬಾರಿಯಾಗಿದ್ದು, ವಿವಿಧ ಸೇವೆಗಳ ದರ ಏರಿಕೆಯಿಂದ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಟೋಲ್, ನೀರು, ವಾಣಿಜ್ಯ ವಿದ್ಯುತ್ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ಬೆಲೆ ಏರಿಕೆ ಜಾರಿಯಾಗಿದೆ.
ಬೆಂಗಳೂರು ನಗರದಲ್ಲಿ ನೀರಿನ ಸರಬರಾಜು ಸಂಸ್ಥೆಯಾದ BWSSB ನೀರಿನ ದರವನ್ನು ಹೆಚ್ಚಿಸಿದ್ದು, ಮನೆಮಠಗಳ ಜೊತೆಗೆ ವಾಣಿಜ್ಯ ಬಳಕೆದಾರರ ಮೇಲೂ ಹೆಚ್ಚುವರಿ ಹೊರೆ ಬಿದ್ದಿದೆ. ಇದಕ್ಕೆ ಜೊತೆಗೆ ಕೈಗಾರಿಕಾ ಮತ್ತು ವಾಣಿಜ್ಯ ಬಳಕೆಯ ವಿದ್ಯುತ್ ದರದಲ್ಲೂ ಏರಿಕೆ ಮಾಡಲಾಗಿದೆ.
ಟೋಲ್ ಪ್ಲಾಜಾಗಳಲ್ಲಿ ಇನ್ನುಮುಂದೆ ನಗದು ಸ್ವೀಕಾರಕ್ಕೆ ನಿರ್ಬಂಧ ಹೇರಲಾಗಿದ್ದು, ಡಿಜಿಟಲ್ ಪಾವತಿ ಕಡ್ಡಾಯವಾಗುತ್ತಿದೆ. ಇದೇ ವೇಳೆ, ನಗದು ವಹಿವಾಟಿನ ಮೇಲೂ ನಿಯಂತ್ರಣ ಹೆಚ್ಚಿಸಲಾಗಿದ್ದು, ವರ್ಷಕ್ಕೆ ₹10 ಲಕ್ಷಕ್ಕಿಂತ ಹೆಚ್ಚು ನಗದು ವ್ಯವಹಾರಕ್ಕೆ ಪಾನ್ ಕಾರ್ಡ್ ಕಡ್ಡಾಯಗೊಳಿಸಲಾಗಿದೆ.
ಬ್ಯಾಂಕಿಂಗ್ ಕ್ಷೇತ್ರದಲ್ಲೂ ಬದಲಾವಣೆ ಆಗಿದ್ದು, ಎಟಿಎಂ ಬಳಕೆ ಶುಲ್ಕವನ್ನು ₹21ರಿಂದ ₹23ಕ್ಕೆ ಏರಿಸಲಾಗಿದೆ. ಇದರಿಂದ ಸಾಮಾನ್ಯ ಗ್ರಾಹಕರಿಗೆ ಹೆಚ್ಚುವರಿ ವೆಚ್ಚ ಎದುರಾಗುತ್ತಿದೆ.
ಇದರೊಂದಿಗೆ ಷೇರುಪೇಟೆ ವಹಿವಾಟುಗಳ ಮೇಲೂ ಹೆಚ್ಚುವರಿ ಶುಲ್ಕ ವಿಧಿಸಲಾಗಿದ್ದು, ವಿಶೇಷವಾಗಿ ಆಪ್ಶನ್ ಮತ್ತು ಫ್ಯೂಚರ್ಸ್ ಟ್ರೇಡಿಂಗ್ ವೆಚ್ಚ ಹೆಚ್ಚಾಗಿದೆ. ಇದರಿಂದ ಹೂಡಿಕೆದಾರರ ಮೇಲೂ ಪರಿಣಾಮ ಬೀಳಲಿದೆ.
ಸಾಲು ಸಾಲು ಬೆಲೆ ಏರಿಕೆಯಿಂದ ಬೇಸತ್ತ ಸಾರ್ವಜನಿಕರು, “ಸಂಬಳ ಹಾಗೇ ಇದೆ, ಆದರೆ ಖರ್ಚು ದಿನೇದಿನೇ ಹೆಚ್ಚುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಬದುಕೋದು ಹೇಗೆ?” ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ನೀರು, ವಿದ್ಯುತ್, ಟೋಲ್, ಬ್ಯಾಂಕಿಂಗ್ ಹಾಗೂ ಹೂಡಿಕೆ ಕ್ಷೇತ್ರಗಳಲ್ಲಿನ ದರ ಏರಿಕೆಯಿಂದ ಜನಸಾಮಾನ್ಯರ ಜೀವನ ದುಬಾರಿಯಾಗುತ್ತಿದ್ದು, ಆರ್ಥಿಕ ಒತ್ತಡ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.
