ಕಳೆದ ಲೋಕಸಭಾ ಚುನಾವಣೆಯ ವೇಳೆ ರಾಜ್ಯದಲ್ಲಿ ಮೈತ್ರಿ ಮಾಡಿಕೊಂಡಿದ್ದ ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳ ನಡುವೆ ನಿಧಾನವಾಗಿ ಬಿರುಕು ಮೂಡತೊಡಗಿದೆ. ಇತ್ತೀಚಿನ ದಿನಗಳಲ್ಲಿ ಎರಡೂ ಪಕ್ಷಗಳ ನಾಯಕರ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಿದ್ದು, ಮೈತ್ರಿ ಪಕ್ಷಗಳು ದೂರಾಗುತ್ತಿವೆಯಾ ಎಂಬ ಪ್ರಶ್ನೆ ಮೂಡ್ತಿದೆ. ಅದಕ್ಕೆ ಇಂಬು ಕೊಡುವಂತೆ, ರಾಜ್ಯ ಸರ್ಕಾರದ ವಿರುದ್ಧ ಸಮರ ಸಾರಿದ್ದ ಉಭಯ ಪಕ್ಷಗಳು, ಈಗ ಪ್ರತ್ಯೇಕವಾಗಿ ಹೋರಾಟಕ್ಕೆ ಇಳಿದಿವೆ..!
2023ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ, ಕಾಂಗ್ರೆಸ್ ಕಮಾಲ್ ಮಾಡಿತ್ತು. ʼಕೈʼ ಘೋಷಿಸಿದ್ದ ಗ್ಯಾರಂಟಿ ಯೋಜನೆಗಳಿಗೆ ಮರುಳಾಗಿದ್ದ ಮತದಾರ, ಕಾಂಗ್ರೆಸ್ʼಗೆ ಜೈ ಅಂದಿದ್ದ. ಇದರ ಪರಿಣಾಮವಾಗಿ ಕಾಂಗ್ರೆಸ್ ಬರೋಬ್ಬರಿ 135 ಸ್ಥಾನಗಳಲ್ಲಿ ಜಯಭೇರಿ ಬಾರಿಸಿತ್ತು. ಇನ್ನೊಂದು ರಾಷ್ಟ್ರೀಯ ಪಕ್ಷವಾದ ಬಿಜೆಪಿ ಕೇವಲ 66 ಸ್ಥಾನ ಗಳಿಸಿದರೆ, ಪ್ರಾದೇಶಿಕ ಪಕ್ಷವಾದ JDS ಕೇವಲ 19 ಸ್ಥಾನಗಳನ್ನು ಗಳಿಸುವ ಮುಖಾಂತರ ಹೀನಾಯ ಸೋಲು ಕಂಡಿತ್ತು. ಮುಖ್ಯವಾಗಿ ಜೆಡಿಎಸ್ʼನ ಭದ್ರ ನೆಲೆಯಾದ ಹಳೆ ಮೈಸೂರು ಭಾಗದಲ್ಲಿ, ಎರಡೂ ರಾಷ್ಟ್ರೀಯ ಪಕ್ಷಗಳು JDS ಮತ ಬುಟ್ಟಿಗೆ ಕೈ ಹಾಕಿದ್ದವು. ಅಲ್ಲದೇ, ಹಳೆ ಮೈಸೂರು ಭಾಗದ ಪ್ರಭಾವಿ ಒಕ್ಕಲಿಗ ನಾಯಕ ಡಿಕೆ ಶಿವಕುಮಾರ್ ಮುಖ್ಯಮಂತ್ರಿಯಾಗ್ತಾರೆ ಎಂಬ ಮಾತು, ಈ ಭಾಗದ ಒಕ್ಕಲಿಗ ಮತದಾರರ ಮೇಲೆ ಪ್ರಭಾವ ಬೀರಿತ್ತು. ಹಾಗಾಗಿ ಯಾವಾಗಲೂ JDS ಬತ್ತಳಿಕೆಗೆ ಹೋಗುತ್ತಿದ್ದ ಒಕ್ಕಲಿಗ ಮತಗಳಲ್ಲಿ, ಸುಮಾರು 5% ಮತಗಳು ಕಾಂಗ್ರೆಸ್ ಕಡೆಗೆ ವಾಲಿದವು. ಇಷ್ಟೇ ಅಲ್ಲದೇ ಬಿಜೆಪಿ ಕೂಡಾ ಹಳೆ ಮೈಸೂರು ಭಾಗದಲ್ಲಿ JDSನ್ನೇ ಪ್ರಮುಖ ಎದುರಾಳಿಯೆಂದು ಪರಿಗಣಿಸಿತ್ತು. JDS ಭದ್ರಕೋಟೆಯಲ್ಲಿ ಅಗ್ರೆಸ್ಸಿವ್ ಆಗಿ ಚುನಾವಣಾ ತಂತ್ರಗಾರಿಕೆ ಹೆಣೆದಿತ್ತು. ಇದರ ಪರಿಣಾಮ, ಎರಡೂ ರಾಷ್ಟ್ರೀಯ ಪಕ್ಷಗಳಲ್ಲಿ ಒಕ್ಕಲಿಗ ಮತಗಳು ಹಂಚಿಹೋಗಿ, JDS ಕೇವಲ 19 ಸ್ಥಾನಗಳಿಗೆ ಕುಸಿಯುವ ದುಸ್ಥಿತಿ ಉಂಟಾಗಿತ್ತು..!

ಯಾವಾಗ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಬರೋಬ್ಬರಿ 135 ಸ್ಥಾನ ಗಳಿಸ್ತೋ, ಆಗ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪ್ರಬಲವಾದ ಕಾಂಗ್ರೆಸ್ ಎದುರಿಸಲು ಮೈತ್ರಿ ಅನಿವಾರ್ಯ ಎಂಬುದು, ಎರಡೂ ಪಕ್ಷಗಳಿಗೆ ಮನವರಿಕೆಯಾಗಿತ್ತು. ಹಾಗಾಗಿ ದೆಹಲಿಯ ವರಿಷ್ಠರ ಸಮ್ಮುಖದಲ್ಲೇ ಎರಡೂ ಪಕ್ಷಗಳ ಮೈತ್ರಿಯ ಬಗ್ಗೆ ಚರ್ಚೆಯಾಯ್ತು, ಎರಡೂ ಪಕ್ಷಗಳ ಮೈತ್ರಿಗೆ ವರಿಷ್ಠರ ಗ್ರೀನ್ ಸಿಗ್ನಲ್ ಕೂಡಾ ಸಿಕ್ತು. ಈ ಹುರುಪಿನಲ್ಲೇ ಎರಡೂ ಪಕ್ಷಗಳು, ಲೋಕಸಭಾ ಚುನಾವಣೆಯ ವೇಳೆ ಜಂಟಿಯಾಗಿ ಪ್ರಚಾರ ಮಾಡಿದವು. ಇದು ಮೈತ್ರಿಯ ಪಾಲಿಗೆ ವರದಾನವೂ ಆಯ್ತು. ಇದರ ಪರಿಣಾಮ ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಪಕ್ಷಗಳು ಕಾಂಗ್ರೆಸ್ ವಿರುದ್ಧ ಹೆಚ್ಚಿನ ಸ್ಥಾನದಲ್ಲಿ ಗೆಲುವು ಸಾಧಿಸಿದವು. JDSಜೊತೆ ಮೈತ್ರಿಯ ಪರಿಣಾಮ, ಹಳೆ ಮೈಸೂರು ಭಾಗದಲ್ಲಿ JDS ಮತಗಳು ಸಂಪೂರ್ಣವಾಗಿ BJPಗೆ ವರ್ಗಾವಣೆಯಾದವು. ಇದರ ಪರಿಣಾಮ BJP-JDS ಮೈತ್ರಿ, ಲೋಕಸಭಾ ಚುನಾವಣೆಯಲ್ಲಿ ರಾಜ್ಯದ 28 ಸ್ಥಾನಗಳ ಪೈಕಿ, 19 ಸ್ಥಾನಗಳಲ್ಲಿ ಜಯಗಳಿಸಿತು. ಹಳೆ ಮೈಸೂರು ಭಾಗದಲ್ಲಿ ಬಿಜೆಪಿ ಗೆಲುವಿಗೆ ಉಡುಗೊರೆ ಎಂಬಂತೆ, JDS ನಾಯಕ HD ಕುಮಾರಸ್ವಾಮಿಗೆ ಕೇಂದ್ರ ಸರ್ಕಾರದ ಮಂತ್ರಿ ಭಾಗ್ಯ ಒಲಿದುಬಂತು, ಕುಮಾರಸ್ವಾಮಿ ಕೇಂದ್ರ ಸಚಿವ ಸಂಪುಟದಲ್ಲಿ ಬೃಹತ್ ಕೈಗಾರಿಕಾ ಸಚಿವರಾದರು..!
ಹೀಗೆ ಲೋಕಸಭಾ ಚುನಾವಣೆ ಮುಗಿದ ಬಳಿಕವೂ ಕೆಲಕಾಲ ಮೈತ್ರಿ ಸುಸೂತ್ರವಾಗಿ ನಡೆಯುತ್ತಿತ್ತು. ಉಭಯ ಪಕ್ಷದವರೂ ಸರ್ಕಾರದ ಮೇಲೆ ಜಂಟಿಯಾಗಿ ವಾಗ್ದಾಳಿಗಳನ್ನ, ಪ್ರತಿಭಟನೆಗಳನ್ನ ನಡೆಸ್ತಾ ಇದ್ರು. ಆದರೆ ಬರುಬರುತ್ತಾ ಮೈತ್ರಿ ಪಕ್ಷದ ನಡುವೆ ಸಣ್ಣನೆ ಒಂದು ಅಪನಂಬಿಕೆ ತಾಂಡವವಾಡತೊಡಗಿತು. ಅದು ಮೊದಲು ಬಹಿರಂಗವಾಗಿದ್ದು, ಮೂಡಾ ಹಗರಣದ ವಿಷಯಕ್ಕೆ, ಬಿಜೆಪಿ ನಡೆಸಿದ ಮೈಸೂರು ಚಲೋ ಪಾದಯಾತ್ರೆಯ ವೇಳೆಗೆ. ಈ ಪಾದಯಾತ್ರೆಗೆ, ಮಿತ್ರಪಕ್ಷವಾಗಿದ್ರೂ ಈ ಬಗ್ಗೆ ಜೆಡಿಎಸ್ʼಗೆ ಆಹ್ವಾನವನ್ನೇ ನೀಡಿಲ್ಲ. ಬಿಜೆಪಿ ಈ ವಿಷಯದಲ್ಲಿ ಏಕಪಕ್ಷೀಯ ನಿರ್ಧಾರ ತೆಗೆದುಕೊಂಡಿದೆ, ಹಾಗಾಗಿ JDS ಈ ಪಾದಯಾತ್ರೆಯಲ್ಲಿ ಭಾಗವಹಿಸುವುದಿಲ್ಲ ಎಂದು JDS ನಾಯಕ ಕುಮಾರಸ್ವಾಮಿ ತಗಾದೆ ತೆಗೆದಿದ್ದರು. ಆದ್ರೆ BJP ವರಿಷ್ಠರ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಮನವೊಲಿಕೆ ನಂತರ ಕುಮಾರಸ್ವಾಮಿ ತಣ್ಣಗಾಗಿದ್ರು. ಅಲ್ಲಿಂದಲೇ ಎರಡೂ ಪಕ್ಷಗಳ ನಡುವೆ ಸಣ್ಣಗೆ ಅಸಮಾದಾನ ಹೊಗೆಯಾಡಲು ಆರಂಭವಾಗಿತ್ತು. ನಮ್ಮ ನಡುವೆ ಎಲ್ಲವೂ ಸರಿಯಿದೆ ಎಂದು ಉಭಯ ಪಕ್ಷಗಳ ನಾಯಕರು ಹೇಳಿಕೊಂಡ್ರೂ, ಅವರ ವರ್ತನೆಗಳಲ್ಲಿ ವ್ಯತ್ಯಾಸವಿದ್ದದ್ದು ಸ್ಪಷ್ಟವಾಗಿ ಕಾಣಿಸುತ್ತಿತ್ತು. ಅಲ್ಲಿಂದಲೇ ಮಿತ್ರಪಕ್ಷಗಳಲ್ಲಿ ಸಣ್ಣಗೆ ಅಸಮಾಧಾನ ಹೊಗೆಯಾಡೋಕೆ ಆರಂಭಿಸಿತ್ತು. ಅಲ್ಲಿಂದ ಸಣ್ಣಗೆ ಶುರುವಾದ ಅಸಮಾಧಾನದ ಅಲೆ, ಈಗ ದೊಡ್ಡ ಸ್ವರೂಪವನ್ನೇ ಪಡೆದುಕೊಳ್ತಾ ಇದೆ. ಇತ್ತೀಚೆಗೆ ಫ್ರೀಡಂ ಪಾರ್ಕ್ʼನಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ನಡೆಸಿದ್ದ ಪ್ರತಿಭಟನೆಗೆ JDSಗೆ ಆಹ್ವಾನವನ್ನೇ ನೀಡಿರಲಿಲ್ಲ. ಇದು JDS ನಾಯಕರ ಅಸಮಾಧಾನಕ್ಕೆ ಕಾರಣವಾಗಿತ್ತು. ಈಗ ರಾಜ್ಯ ಸರ್ಕಾರದ ಬೆಲೆಯೇರಿಕೆ ಖಂಡಿಸಿ, ಬಿಜೆಪಿ ಜನಾಕ್ರೋಶ ಯಾತ್ರೆ ಕೈಗೊಂಡಿದೆ. ಈ ಯಾತ್ರೆಗೆ JDS ಭದ್ರ ಬೇರು ಹೊಂದಿರುವ ಮೈಸೂರಿನಿಂದ ಚಾಲನೆ ಸಿಕ್ಕಿರುವುದು ವಿಶೇಷ. ಆದರೆ ಈ ಯಾತ್ರೆಗೂ BJP JDS ಗೆ ಆಹ್ವಾನವನ್ನೇ ನೀಡಿಲ್ಲ. ಈ ಕುರಿತು JDS ಶಾಸಕಾಂಗ ಪಕ್ಷದ ನಾಯಕ ಸುರೇಶ್ ಬಾಬು ಅಸಮಾಧಾನ ವ್ಯಕ್ತಪಡಿಸಿದ್ದರು. ಆದರೆ ಇದರಿಂದ ಯಾವುದೇ ಪ್ರಯೋಜನವಾಗಿರಲಿಲ್ಲ.

ತನ್ನ ಮನವಿಗೂ BJP ಕೇರ್ ಮಾಡದಿದ್ದಾಗ, ಈಗ JDS ಪ್ರತ್ಯೇಕವಾಗಿ ಸರ್ಕಾರದ ವಿರುದ್ಧ ಹೋರಾಟ ರೂಪಿಸಲು ಹೊರಟಿದೆ. ಈಗಾಗಲೇ ರಾಜ್ಯ ಸರ್ಕಾರದ ವಿರುದ್ದ JDS ʼಸಾಕಪ್ಪಾ ಸಾಕು ಕಾಂಗ್ರೆಸ್ ಸರ್ಕಾರ ಸಾಕುʼ ಎನ್ನುವ ಅಭಿಯಾನ ಆರಂಭಿಸಿದೆ. ಇದಕ್ಕೆ ಡಿಜಿಟಲ್ ರೂಪ ಕೊಡುವ ಉದ್ದೇಶ ಕೂಡ JDSಗಿದೆ. ಏ.12 ರಂದು ಕೇಂದ್ರ ಸಚಿವ ಕುಮಾರಸ್ವಾಮಿ ನೇತೃತ್ವದಲ್ಲಿ ಫ್ರೀಡಂ ಪಾರ್ಕʼನಲ್ಲಿ ಬೃಹತ್ ಪ್ರತಿಭಟನೆ ನಡೆಯಲಿದೆ. ಆ ಮೂಲಕ ದೊಡ್ಡ ಮಟ್ಟದಲ್ಲಿ ರಾಜ್ಯ ಸರ್ಕಾರದ ವಿರುದ್ಧ ಹೋರಾಟ ರೂಪಿಸಲಾಗುವುದು ಎಂದು JDS ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತಿಳಿಸಿದ್ದಾರೆ. ಆ ಮೂಲಕ BJP ಹೋರಾಟಕ್ಕೆ ಟಾಂಗ್ ನೀಡಲು ಹೊರಟಿದೆ JDS. ಒಟ್ಟಿನಲ್ಲಿ ಒಂದೇ ದೋಣಿಯ ಭಾಗವಾಗಬೇಕಿದ್ದ ಎರಡು ಮೈತ್ರಿ ಪಕ್ಷಗಳು, ಸರ್ಕಾರದ ವಿರುದ್ಧ ಪ್ರತ್ಯೇಕ ಹೋರಾಟ ನಡೆಸುತ್ತಿವೆ. ಈ ಬೆಳವಣಿಗೆ ಮುಂದಿನ ದಿನಗಳಲ್ಲಿ ಯಾವ ಹಂತಕ್ಕೆ ತಲುಪಲಿದೆ? ಎರಡೂ ಪಕ್ಷಗಳ ನಡುವಿನ ಮೈತ್ರಿ ದೀರ್ಘಕಾಲ ಉಳಿಯಲಿದೆಯಾ ಎನ್ನುವುದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ..!