ಸ್ಯಾಂಡಲ್ವುಡ್ ನಟ ಡಾಲಿ ಧನಂಜಯ್ ಜೀವನದಲ್ಲಿ ಹೊಸ ಹೊಸ ಬೆಳವಣಿಗೆಗಳು ನಡೆಯುತ್ತಿವೆ. ಇತ್ತೀಚೆಗಷ್ಟೇ ತಾವು ವರಿಸುವ ವಧುವಿನ ಕುರಿತು ಫೋಟೋ ಜೊತೆಗೆ ಮಾಹಿತಿ ಹಂಚಿಕೊಂಡು ಅಭಿಮಾನಿಗಳಿಗೆ ಸರ್ಪ್ರೈಸ್ ನೀಡಿದ್ದರು. ಇದರ ಬೆನ್ನಲ್ಲೇ ಇದೀಗ ಎರಡು ಕಡೆಯ ಕುಟುಂಬಸ್ಥರ ಸಮ್ಮುಖದಲ್ಲಿ ಲಗ್ನಪತ್ರಿಕೆ ಬರೆಸುವ ಶಾಸ್ತ್ರ ಹಾಗೂ ನಿಶ್ಚಿತಾರ್ಥ ಸಂಭ್ರಮ ಮಾಡಿಕೊಂಡಿದ್ದಾರೆ.
ಕನ್ನಡ ಚಿತ್ರರಂಗದಲ್ಲಿ ಡಾಲಿ ಎಂದೇ ಖ್ಯಾತಿ ಪಡೆದ ಧನಂಜಯ್ ಅವರು ಧನ್ಯತಾ ಅವರ ಜೊತೆ ಅರಸೀಕೆರೆಯ ಕಾಳೇನಹಳ್ಳಿಯಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಲಗ್ನ ಶಾಸ್ತ್ರದಲ್ಲಿ ಧನಂಜಯ್, ಧನ್ಯತಾ ಹಾಗೂ ಎರಡು ಕಡೆಯ ಕುಟುಂಬಸ್ಥರು ಭಾಗಿಯಾಗಿದ್ದರು. ಸಿನಿ ರಂಗಕ್ಕೆ ಬಂದ ಮೇಲೆ ಧನಂಜಯ್ ಅವರ ಬದುಕಲ್ಲಿ ಸಾಕಷ್ಟು ಬದಲಾವಣೆಗಳು ಆದವು. ಅದರಲ್ಲಿ ಇದು ಕೂಡ ಒಂದು ಆಗಿದೆ. ಧನಂಜಯ್ ಹೋದಲ್ಲೆಲ್ಲ ಮದುವೆ ಯಾವಾಗ, ಹುಡುಗಿ ಯಾರು, ನೀವು ವಿವಾಹ ಆಗುತ್ತೀರಾ ಎಂದು ಅಭಿಮಾನಿಗಳು ಪ್ರಶ್ನೆಗಳ ಮೇಲೆ ಪ್ರಶ್ನೆ ಕೇಳುತ್ತಿದ್ದರು.
ಇದನ್ನೆಲ್ಲ ಕೇಳಿಸಿಕೊಂಡು ಸುಮ್ಮನಿದ್ದ ಧನಂಜಯ್ ಅವರು ಒಂದೇ ಬಾರಿಗೆ ಭಾವಿ ಪತ್ನಿ ಜೊತೆಗೆ ಫೋಟೋ ಶೂಟ್ ಮಾಡಿಸಿ ಎಲ್ಲರಿಗೂ ಬಿಗ್ ಶಾಕ್ ಕೊಟ್ಟಿದ್ದರು. ಧನ್ಯತಾ ಅವರನ್ನು ವಿವಾಹ ಆಗಲಿದ್ದಾರೆ. ಮೈಸೂರಿನ ಎಕ್ಸಿಬಿಷನ್ ಗ್ರೌಂಡ್ನಲ್ಲಿ 2025ರ ಫೆಬ್ರವರಿ 16 ರಂದು ಧನಂಜಯ್ ಹಾಗೂ ಧನ್ಯತಾ ಅವರು ಹೊಸ ಜೀವನಕ್ಕೆ ಕಾಲಿಡಲಿದ್ದಾರೆ. ಸದ್ಯ ಧನಂಜಯ್ ಅವರ ಮದುವೆ ಸುದ್ದಿಯಿಂದ ಅವರ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ.