Ashwaveega News 24×7 ಏಪ್ರಿಲ್ 13 – 2026 : ದಾವಣಗೆರೆ/ಬೆಂಗಳೂರು : ದಾವಣಗೆರೆ ರಾಜಕೀಯದಲ್ಲಿ ಉದ್ವಿಗ್ನತೆ ಮುಂದುವರಿದಿದ್ದು, ಕಾಂಗ್ರೆಸ್ ನಾಯಕರ ನಡುವಿನ ಮಾತಿನ ಸಮರ ತೀವ್ರಗೊಂಡಿದೆ. ಈ ನಡುವೆಯೇ ಕಾಂಗ್ರೆಸ್ ನಾಯಕ ಸಲೀಂ ಅಹ್ಮದ್ ಮತ್ತೊಂದು ಸ್ಪಷ್ಟನೆ ನೀಡಿದ್ದು, ಎಂಎಲ್ಸಿ ಅಬ್ದುಲ್ ಜಬ್ಬಾರ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
“ನಾನು ಎಲ್ಲಿಯೂ ಜಬ್ಬಾರ್ ಅವರ ಹೆಸರನ್ನು ಉಲ್ಲೇಖಿಸಿ ಆರೋಪ ಮಾಡಿಲ್ಲ. ಕಾಣದ ಕೈಗಳು ಕೆಲಸ ಮಾಡಿವೆ ಎಂದಷ್ಟೇ ಹೇಳಿದ್ದೇನೆ . ಅದಕ್ಕೆ ಬೇಸರ ಪಡುವ ಪ್ರಶ್ನೆಯೇ ಇಲ್ಲ,” ಎಂದು ಸಲೀಂ ಅಹ್ಮದ್ ಹೇಳಿದ್ದಾರೆ.
ಜಬ್ಬಾರ್ ರಾಜೀನಾಮೆ ಕುರಿತು ಮಾತನಾಡಿದ ಅವರು, “ನನ್ನ ಆರೋಪದ ಹಿನ್ನೆಲೆ ಅವರು ರಾಜೀನಾಮೆ ನೀಡಿದ್ದಾರೆ ಎಂಬುದು ಸಂಪೂರ್ಣ ಸುಳ್ಳು. ನಾನು ಯಾರ ಹೆಸರನ್ನೂ ಹೇಳದಿದ್ದಾಗ ಅವರು ಬೇಸರಪಡುವುದೇ ಹೇಗೆ ?” ಎಂದು ಪ್ರಶ್ನಿಸಿದರು .
ಇನ್ನಷ್ಟು ಕಿಡಿಕಾರಿದ ಸಲೀಂ, “ನನ್ನ ವಿರುದ್ಧ ಮಾಡುತ್ತಿರುವುದು ಸುಳ್ಳು ಆರೋಪಗಳು. ಇದು ಅವರ ವ್ಯಕ್ತಿತ್ವವನ್ನು ತೋರಿಸುತ್ತದೆ,” ಎಂದು ತಿರುಗೇಟು ನೀಡಿದರು.
ದಾವಣಗೆರೆ ಟಿಕೆಟ್ ವಿಚಾರದಲ್ಲಿಯೂ ಪ್ರತಿಕ್ರಿಯಿಸಿದ ಅವರು, “ಅಲ್ಪಸಂಖ್ಯಾತರ ಒಪ್ಪಿಗೆ ಮೇರೆಗೆ ಸಮರ್ಥ್ಗೆ ಟಿಕೆಟ್ ನೀಡಲಾಗಿದೆ. ‘ಅವರು ಕರೆದಿಲ್ಲ, ಇವರು ಕರೆದಿಲ್ಲ’ ಎಂಬ ನೆಪ ಬೇಡ,” ಎಂದು ಹೇಳಿದರು.
ಇದಲ್ಲದೆ, ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಜೊತೆಗೆ ಕಾಂಗ್ರೆಸ್ ಹೈಕಮಾಂಡ್ ನಾಯಕ ರಣದೀಪ್ ಸಿಂಗ್ ಸುರ್ಜೇವಾಲಾ ನೀಡಿರುವ ಸೂಚನೆಗಳೇ ಸಾಕು ಎಂದು ಅವರು ಸ್ಪಷ್ಟಪಡಿಸಿದರು.
ಈ ಹೇಳಿಕೆಗಳಿಂದ ದಾವಣಗೆರೆ ಕಾಂಗ್ರೆಸ್ ರಾಜಕೀಯದಲ್ಲಿ ಒಳಜಗಳ ಮತ್ತಷ್ಟು ತೀವ್ರಗೊಂಡಿದ್ದು, ಮುಂದಿನ ಬೆಳವಣಿಗೆಗಳತ್ತ ರಾಜಕೀಯ ವಲಯ ಕಣ್ಣಿಟ್ಟಿದೆ .
