
ರಾಜ್ಯದಲ್ಲಿ ಡೆಂಘೀ ಸೋಂಕು ದಿನದಿಂದ ದಿನಕ್ಕೆ ಗಂಭೀರ ರೂಪ ತೆಗೆದುಕೊಳ್ಳುತ್ತಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ 21,557ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಯಲ್ಲಿ ಮಾತ್ರವೇ 215 ಡೆಂಘೀ ಕೇಸ್ ಪತ್ತೆಯಾಗಿದ್ದು, ಇದರಿಂದ ಒಟ್ಟು ಸಕ್ರೀಯ ಪ್ರಕರಣಗಳ ಸಂಖ್ಯೆ 21,557ಕ್ಕೆ ತಲುಪಿದೆ.
ಇದರ ನಡುವೆಯೇ, ಗುಣಮುಖರಾದವರ ಸಂಖ್ಯೆ 19,913 ಆಗಿದ್ದು, ಕಳೆದ 24 ಗಂಟೆಯಲ್ಲಿ 259 ಮಂದಿ ಡೆಂಘಿಯಿಂದ ಚೇತರಿಸಿಕೊಂಡಿದ್ದಾರೆ. ಈ ವರ್ಷ ಡೆಂಘೀ ಸೋಂಕಿಗೆ ಬಲಿಯಾದವರ ಸಂಖ್ಯೆ 10ಕ್ಕೆ ಏರಿಕೆಯಾಗಿದೆ, ಇದು ರಾಜ್ಯದ ಆರೋಗ್ಯ ವ್ಯವಸ್ಥೆಗೆ ದೊಡ್ಡ ಸವಾಲಾಗಿದೆ.
ಬಿಬಿಎಂಪಿ ವ್ಯಾಪ್ತಿಯಲ್ಲೂ ಡೆಂಘೀ ಸೋಂಕು ನಿಯಂತ್ರಣಕ್ಕೆ ಬಾರದ ಸ್ಥಿತಿಯಲ್ಲಿದ್ದು, ಕಳೆದ 24 ಗಂಟೆಯಲ್ಲಿ 128 ಹೊಸ ಪ್ರಕರಣಗಳು ಪತ್ತೆಯಾಗಿವೆ. ಇದುವರೆಗೆ ಬಿಬಿಎಂಪಿ ವ್ಯಾಪ್ತಿಯಲ್ಲಿ 9,801 ಡೆಂಘೀ ಪ್ರಕರಣಗಳು ದಾಖಲಾಗಿವೆ.
ಡೆಂಘೀ ಸೋಂಕು ಪ್ರಭಾವ 0-1 ವರ್ಷದ ಮಕ್ಕಳಲ್ಲಿಯೂ ತೀವ್ರವಾಗಿದ್ದು, ಕಳೆದ 24 ಗಂಟೆಯಲ್ಲಿ 4 ಕಂದಮ್ಮಗಳಿಗೆ ಡೆಂಘೀ ದೃಢಪಟ್ಟಿದೆ. ಇದುವರೆಗೆ 408 ಕಂದಮ್ಮಗಳಿಗೆ ಡೆಂಘೀ ಸೋಂಕು ಪತ್ತೆಯಾಗಿದೆ. 1-18 ವರ್ಷದೊಳಗಿನ ಮಕ್ಕಳಲ್ಲಿ ಕಳೆದ 24 ಗಂಟೆಯಲ್ಲಿ 83 ಡೆಂಘೀ ಪ್ರಕರಣಗಳು ಪತ್ತೆಯಾದರೆ, ಈ ವಯೋಮಾನದ ಮಕ್ಕಳಲ್ಲಿ ಸೋಂಕು ಪತ್ತೆಯಾದ ಒಟ್ಟು ಪ್ರಕರಣಗಳ ಸಂಖ್ಯೆ 7,654ಕ್ಕೆ ಏರಿಕೆಯಾಗಿದೆ.
ಇದರಲ್ಲಿ 18 ವರ್ಷ ಮೇಲ್ಪಟ್ಟ ವ್ಯಕ್ತಿಗಳಲ್ಲಿ ಕಳೆದ 24 ಗಂಟೆಯಲ್ಲಿ 128 ಮಂದಿಗೆ ಡೆಂಘೀ ಅಟ್ಯಾಕ್ ಆಗಿದ್ದು, ಈ ವಯೋಮಾನದ ಜನರಲ್ಲಿ ಸೋಂಕು ದೃಢಪಟ್ಟ ಒಟ್ಟು ಪ್ರಕರಣಗಳ ಸಂಖ್ಯೆ 13,495 ಆಗಿದೆ.
ರಾಜ್ಯದ ಆರೋಗ್ಯ ಇಲಾಖೆಯು ಈ ಪರಿಸ್ಥಿತಿಯನ್ನು ನಿಯಂತ್ರಿಸಲು ತಕ್ಷಣ ಕ್ರಮ ಕೈಗೊಂಡು, ಸಾರ್ವಜನಿಕರಿಗೆ ಮುನ್ನೆಚ್ಚರಿಕೆ ವಹಿಸಲು ಮನವಿ ಮಾಡಿದೆ.