Ashwaveega News 24×7 ಜನವರಿ 20 – ಬೆಂಗಳೂರು : ಅಮಾನತುಗೊಂಡಿರುವ ಡಿಜಿಪಿ ರಾಮಚಂದ್ರ ರಾವ್ಗೆ ಸಂಬಂಧಿಸಿದ ರಾಸಲೀಲೆ ಆರೋಪದ ಕಹಾನಿ ದಿನದಿಂದ ದಿನಕ್ಕೆ ಹೊಸ ತಿರುವು ಪಡೆದುಕೊಳ್ಳುತ್ತಿದೆ. ವೈರಲ್ ಆಗಿರುವ ವಿಡಿಯೋ–ಆಡಿಯೋಗಳ ಬೆನ್ನಲ್ಲೇ, ಈ ಪ್ರಕರಣ ಸುಮಾರು ಆರು ವರ್ಷಗಳ ಹಿಂದಿನದ್ದಾಗಿರಬಹುದು ಎಂಬ ಮಾಹಿತಿ ಹೊರಬರುತ್ತಿದ್ದು, ರಾಜಕೀಯ ಹಾಗೂ ಆಡಳಿತ ವಲಯದಲ್ಲಿ ತೀವ್ರ ಸಂಚಲನ ಮೂಡಿಸಿದೆ.
ಮಾಹಿತಿಗಳ ಪ್ರಕಾರ, ರಾಮಚಂದ್ರ ರಾವ್ ಬೆಳಗಾವಿಯಲ್ಲಿ ಐಜಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಅವಧಿಯಲ್ಲಿ ಈ ಘಟನೆಗಳು ನಡೆದಿರಬಹುದು ಎನ್ನಲಾಗಿದೆ. ಬೆಳಗಾವಿ ಮೂಲದ ಪ್ರಾಧ್ಯಾಪಕಿಯೊಬ್ಬರೊಂದಿಗೆ “ಪ್ರಣಯ” ಸಂಬಂಧ ಹೊಂದಿದ್ದ ಆರೋಪ ಕೇಳಿಬಂದಿದ್ದು, ಸರ್ಕಾರಿ ಕಚೇರಿಯಲ್ಲಿಯೇ ಅಸಭ್ಯ ವರ್ತನೆ ನಡೆಸಿದಂತೆ ಕಾಣಿಸುವ ದೃಶ್ಯಗಳು ವೈರಲ್ ಆಗಿವೆ.
ಇನ್ನೊಂದು ಮಾಹಿತಿ ಪ್ರಕಾರ, ಪತಿ–ಪತ್ನಿ ಜಗಳದ ಹಿನ್ನೆಲೆಯಲ್ಲಿ ದೂರು ನೀಡಲು ತೆರಳಿದ್ದ ಮಹಿಳೆಗೆ ಸಹಾಯ ಮಾಡುವ ನೆಪದಲ್ಲಿ ರಾಮಚಂದ್ರ ರಾವ್ ಅಸಭ್ಯವಾಗಿ ವರ್ತಿಸಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ. ಈ ರಾಸಲೀಲೆ ಕುರಿತು ಇಂಟೆಲಿಜೆನ್ಸ್ ಇಲಾಖೆ ಹಿಂದೆಯೇ ಮಾಹಿತಿ ಕಲೆಹಾಕಿತ್ತು ಎಂಬ ಮಾತುಗಳು ಕೂಡ ಹೊರಬರುತ್ತಿವೆ.
ವಿಡಿಯೋ ಹಾಗೂ ಆಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ನಂತರ, ಸರ್ಕಾರ ತಕ್ಷಣವೇ ಕ್ರಮ ಕೈಗೊಂಡಿದ್ದು, ರಾಮಚಂದ್ರ ರಾವ್ ಅವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದೆ. ಸದ್ಯ ವೈರಲ್ ವಿಡಿಯೋ – ಆಡಿಯೋಗಳ ಮೂಲ, ಸತ್ಯಾಸತ್ಯತೆ ಹಾಗೂ ಅವುಗಳ ಹಿನ್ನೆಲೆ ಕುರಿತು ತನಿಖೆ ನಡೆಯುತ್ತಿದೆ.
ಇದೊಂದೆಡೆ, ಡಿಜಿಪಿ ರಾಮಚಂದ್ರ ರಾವ್ ಕಾನೂನು ಹೋರಾಟಕ್ಕೆ ಮುಂದಾಗುವ ಬಗ್ಗೆ ಆಪ್ತರೊಂದಿಗೆ ಚರ್ಚೆ ನಡೆಸುತ್ತಿದ್ದಾರೆ ಎಂಬ ಮಾಹಿತಿ ಕೂಡ ಲಭ್ಯವಾಗಿದೆ. ಪ್ರಕರಣದ ತನಿಖೆ ಯಾವ ದಿಕ್ಕು ತಾಳಲಿದೆ, ಇನ್ನೇನು ಸ್ಫೋಟಕ ವಿಚಾರಗಳು ಹೊರಬೀಳಲಿವೆ ಎಂಬುದರ ಮೇಲೆ ಸಾರ್ವಜನಿಕರ ಗಮನ ನೆಟ್ಟಿದೆ …
