Ashwaveega News 24×7 ಮಾರ್ಚ್ 21 – 2026 : ಬೆಂಗಳೂರು: ಇಂಧನ ಬೆಲೆಗಳಲ್ಲಿ ಭಾರೀ ಏರಿಕೆ ಕಂಡುಬಂದಿದೆ . ಡೀಸೆಲ್ ಬೆಲೆಯಲ್ಲಿ ಏಕಾಏಕಿ 22 ರೂಪಾಯಿ ಹೆಚ್ಚಳವಾಗಿದ್ದು, ಲೀಟರ್ ಡೀಸೆಲ್ ಬೆಲೆ ಈಗ 109.59 ರೂಪಾಯಿಗೆ ಏರಿಕೆಯಾಗಿದೆ. ಇದಕ್ಕೂ ಮೊದಲು 87.57 ರೂಪಾಯಿ ಇದ್ದ ಡೀಸೆಲ್ ಬೆಲೆ , ಈ ಹೆಚ್ಚಳದಿಂದ ಸಾರ್ವಜನಿಕರಿಗೆ ದೊಡ್ಡ ಹೊರೆ ಆಗಿದೆ .
ಸರ್ಕಾರಿ ತೈಲ ಕಂಪನಿಯಾದ ಇಂಡಿಯನ್ ಆಯಿಲ್ ಕಾರ್ಪೋರೇಷನ್ ಮಹತ್ವದ ನಿರ್ಧಾರ ಕೈಗೊಂಡಿದ್ದು, ಇಂಡಸ್ಟ್ರಿಯಲ್ ಡೀಸೆಲ್ ಬೆಲೆಯಲ್ಲಿ ಈ ಭಾರೀ ಏರಿಕೆ ಜಾರಿಯಾಗಿದೆ. ಅಂತರರಾಷ್ಟ್ರೀಯ ಪರಿಸ್ಥಿತಿ, ವಿಶೇಷವಾಗಿ ಯುದ್ಧದ ಪರಿಣಾಮದಿಂದ ಪೆಟ್ರೋಲ್ ಮತ್ತು ಡೀಸೆಲ್ ಆಮದು ಕುಂಠಿತವಾಗಿರುವುದು ಇದಕ್ಕೆ ಪ್ರಮುಖ ಕಾರಣ ಎಂದು ತಿಳಿದುಬಂದಿದೆ.
ನಗರಗಳ ಹೊರವಲಯಗಳಲ್ಲಿ ಈಗಾಗಲೇ ಇಂಧನ ಕೊರತೆ ಕಾಣಿಸಿಕೊಂಡಿದ್ದು, ಅನೇಕ ಪೆಟ್ರೋಲ್ ಬಂಕ್ಗಳಲ್ಲಿ “ನೋ ಸ್ಟಾಕ್” ಬೋರ್ಡ್ ಹಾಕಲಾಗಿದೆ. ಇದರಿಂದ ವಾಹನ ಸವಾರರು ಆತಂಕಕ್ಕೀಡಾಗಿದ್ದಾರೆ.
ಇದೇ ವೇಳೆ, ಪ್ರೀಮಿಯಂ ಪೆಟ್ರೋಲ್ ಬೆಲೆಯಲ್ಲಿ ಸಹ ಲೀಟರ್ಗೆ 2 ರೂಪಾಯಿ ಹೆಚ್ಚಳ ಮಾಡಲಾಗಿದೆ. ಇಂಧನ ಬೆಲೆ ಏರಿಕೆಯಿಂದ ಸಾರಿಗೆ, ಕೃಷಿ ಮತ್ತು ಕೈಗಾರಿಕಾ ಕ್ಷೇತ್ರಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.
ಮುಂದಿನ ದಿನಗಳಲ್ಲಿ ಇಂಧನ ಬೆಲೆಗಳು ಇನ್ನಷ್ಟು ಏರಿಕೆಯಾಗುವ ಭೀತಿ ವ್ಯಕ್ತವಾಗಿದೆ. ಸರ್ಕಾರ ಮತ್ತು ತೈಲ ಕಂಪನಿಗಳು ಪರಿಸ್ಥಿತಿಯನ್ನು ಹೇಗೆ ನಿಯಂತ್ರಿಸುತ್ತವೆ ಎಂಬುದನ್ನು ಕಾದು ನೋಡಬೇಕಿದೆ.
