Ashwaveega News 24×7 ಫೆಬ್ರವರಿ 09 -2026 – ಬೆಂಗಳೂರು : ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತೊಂದು ಸುತ್ತಿನ ದೆಹಲಿ ಯಾತ್ರೆಗೆ ಹೊರಟಿರುವುದು ಕಾಂಗ್ರೆಸ್ ಪಾಳಯದಲ್ಲಿ ಭಾರೀ ಕುತೂಹಲ ಕೆರಳಿಸಿದೆ. ಬಜೆಟ್ ಮುಗಿದ ಬೆನ್ನಲ್ಲೇ ‘ಕೈ’ ಪಕ್ಷದೊಳಗೆ ಪವರ್ ಶೇರಿಂಗ್ ಚರ್ಚೆ ಮತ್ತೆ ಜೀವ ಪಡೆದಿದೆಯೇ ? ಎಂಬ ಪ್ರಶ್ನೆಗಳು ಎದ್ದಿವೆ.
ಡಿಕೆಶಿ ನಡೆ ‘ಕೈ’ ಪಡೆಯಲ್ಲಿ ಹಲವು ಅರ್ಥ ಕಥನಗಳಿಗೆ ಕಾರಣವಾಗಿದ್ದು, ಹೈಕಮಾಂಡ್ ನಾಯಕರ ಭೇಟಿಗಾಗಿ ದೆಹಲಿಗೆ ತೆರಳಿದ್ದಾರೆ ಎಂಬ ಚರ್ಚೆ ಜೋರಾಗಿದೆ. ಈ ನಡುವೆ ಸಿಎಂ ಸಿದ್ದರಾಮಯ್ಯ ಪುತ್ರ ಯತೀಂದ್ರ ನೀಡಿದ “ಸಿದ್ದರಾಮಯ್ಯನೇ ಐದು ವರ್ಷ ಸಿಎಂ” ಎಂಬ ಸ್ಫೋಟಕ ಹೇಳಿಕೆ ಕಾಂಗ್ರೆಸ್ ವಲಯದಲ್ಲಿ ಸಂಚಲನ ಸೃಷ್ಟಿಸಿದೆ.
ಈ ಹೇಳಿಕೆಯ ಬೆನ್ನಲ್ಲೇ ಈಗಾಗಲೇ ಕೆಂಡವಾಗಿದ್ದ ಡಿಕೆಶಿ ಕ್ಯಾಂಪ್ ಮತ್ತಷ್ಟು ಕೆರಳಿದ್ದು, “ನಮ್ಮನ್ನ ಪ್ರವೋಕ್ ಮಾಡಬೇಡಿ” ಎಂದು ಡಿಕೆ ಆಪ್ತರು ವಾರ್ನಿಂಗ್ ನೀಡಿರುವುದು ರಾಜಕೀಯ ತಾಪಮಾನ ಹೆಚ್ಚಿಸಿದೆ.
ಈ ಎಲ್ಲಾ ಬೆಳವಣಿಗೆಗಳ ನಡುವೆ ದೆಹಲಿಗೆ ಹೊರಟಿರುವ ಡಿ.ಕೆ. ಶಿವಕುಮಾರ್, ಸಿಎಂ ಪುತ್ರನ ಹೇಳಿಕೆ ಕುರಿತು ದೆಹಲಿ ವರಿಷ್ಠರಿಗೆ ದೂರು ನೀಡಲಿದಾರಾ ? ಎಂಬ ಪ್ರಶ್ನೆ ಉದ್ಭವಿಸಿದೆ. ಕೇಂದ್ರ ಸಚಿವರ ಭೇಟಿಯ ನೆಪದಲ್ಲಿ ಕಾಂಗ್ರೆಸ್ ಹೈಕಮಾಂಡ್ ಜೊತೆ ಪವರ್ ಶೇರಿಂಗ್ ವಿಚಾರ ಚರ್ಚೆ ನಡೆಸುವ ಸಾಧ್ಯತೆ ಇದೆ .
ಆದರೆ, ಸಂಸತ್ ಅಧಿವೇಶನದಲ್ಲಿ ಬ್ಯುಸಿಯಾಗಿರುವ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರನ್ನು ಡಿಕೆಶಿ ಭೇಟಿ ಮಾಡುವ ಸಾಧ್ಯತೆ ಬಹುತೇಕ ಅನುಮಾನವಾಗಿದೆ. ಈ ಹಿನ್ನೆಲೆಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೊಂದಿಗೆ ಮಾತುಕತೆ ನಡೆಯುವ ಸಾಧ್ಯತೆ ಹೆಚ್ಚಿದೆ ಎಂದು ಪಕ್ಷದ ಮೂಲಗಳು ಸೂಚಿಸುತ್ತಿವೆ.
“ಪವರ್ ಶೇರಿಂಗ್” ಕುರಿತಾಗಿ ಹೈಕಮಾಂಡ್ ಕೊಟ್ಟಿದ್ದ ಡೇಟ್ ಅನ್ನು ಡಿಸಿಎಂ ಡಿಕೆಶಿ ಮತ್ತೆ ನೆನಪಿಸಿಕೊಳ್ಳುವರಾ ? ಅಥವಾ ದೆಹಲಿ ಯಾತ್ರೆ ಕೇವಲ ರೂಟಿನ್ ರಾಜಕೀಯ ಭೇಟಿಯೇ? ಎಂಬುದೇ ಈಗ ಕಾಂಗ್ರೆಸ್ ಒಳರಾಜಕಾರಣದಲ್ಲಿ ದೊಡ್ಡ ಪ್ರಶ್ನೆಯಾಗಿ ಉಳಿದಿದೆ.
