Ashwaveega News 24×7 ಫೆಬ್ರವರಿ 10 -2026 – ಬೆಂಗಳೂರು : ರಾಜ್ಯ ಕಾಂಗ್ರೆಸ್ನಲ್ಲಿ “ಅಧಿಕಾರ ಹಂಚಿಕೆ” ವಿಚಾರ ಮತ್ತೆ ಭಾರೀ ಚರ್ಚೆಗೆ ಕಾರಣವಾಗಿದ್ದು, ಪಕ್ಷದ ಒಳಗಿನ ಪವರ್ ಫೈಟ್ ರೋಚಕ ಘಟ್ಟ ತಲುಪಿದೆ. ರಾಜ್ಯ ಬಜೆಟ್ ಅಧಿವೇಶನ ನಡೆಯುತ್ತಿರುವ ನಡುವೆಯೇ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ದಿಢೀರ್ ದೆಹಲಿಗೆ ತೆರಳಿರುವುದು ರಾಜಕೀಯ ವಲಯದಲ್ಲಿ ಕುತೂಹಲ ಕೆರಳಿಸಿದೆ.
ಕೊಟ್ಟ ಮಾತಿನಂತೆ ಅಧಿಕಾರ ಹಂಚಿಕೆ ವಿಚಾರವನ್ನು ಹೈಕಮಾಂಡ್ ಗಮನಕ್ಕೆ ತರುವ ಉದ್ದೇಶದಿಂದಲೇ ಈ ದೆಹಲಿ ಭೇಟಿ ಕೊಟ್ಟಿದ್ದಾರೆ . ಡಿಕೆಶಿ ದೆಹಲಿಗೆ ತೆರಳುವ ಮುನ್ನವೇ, ಸಿದ್ದರಾಮಯ್ಯ ಪುತ್ರ ಯತೀಂದ್ರ “ಸಿದ್ದರಾಮಯ್ಯ 5 ವರ್ಷ ಮುಖ್ಯಮಂತ್ರಿ” ನೀಡಿದ ಹೇಳಿಕೆ, ಕಾಂಗ್ರೆಸ್ ವರಿಷ್ಠರ ಅಸಮಾಧಾನಕ್ಕೆ ಕಾರಣವಾಗಿದೆ.
ಪಕ್ಷದ ವರಿಷ್ಠರು ಸೈಲೆಂಟ್ ಆಗಿರುವಂತೆ ಸೂಚಿಸಿದ್ದರೂ, ಯತೀಂದ್ರ ನೀಡಿದ ಹೇಳಿಕೆ, ಡಿಕೆಶಿ ಶಿಬಿರದಲ್ಲಿ ಅಸಹನೆಯನ್ನು ಮತ್ತಷ್ಟು ಹೆಚ್ಚಿಸಿದೆ. ಈ ಹಿನ್ನೆಲೆ, ಮತ್ತೆ ವರಿಷ್ಠರ ಜತೆ ಮಾತುಕತೆಗೆ ಡಿ.ಕೆ. ಶಿವಕುಮಾರ್ ಮುಂದಾಗಿದ್ದಾರೆ.
ಬಜೆಟ್ ಅಧಿವೇಶನದಲ್ಲಿ ಬ್ಯುಸಿಯಾಗಿರುವ ರಾಹುಲ್ ಗಾಂಧಿ ಅವರನ್ನು ತಕ್ಷಣ ಭೇಟಿಯಾಗಲು ಸಾಧ್ಯವಾಗದ ಹಿನ್ನೆಲೆಯಲ್ಲಿ, ಡಿಕೆಶಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿಯಾಗಿ ಪರಿಸ್ಥಿತಿ ವಿವರಿಸುವ ಸಾಧ್ಯತೆ ಇದೆ. ಜೊತೆಗೆ ರಣದೀಪ್ ಸುರ್ಜೇವಾಲಾ ಹಾಗೂ ಕೆ.ಸಿ. ವೇಣುಗೋಪಾಲ ಜತೆಗೂ ಚರ್ಚೆ ನಡೆಸಲಾಗಿದೆ ಎಂದು ತಿಳಿದುಬಂದಿದೆ.
ಶಾಸಕರ ವಿದೇಶ ಪ್ರವಾಸ, ಆಪ್ತ ಶಾಸಕರ ಒತ್ತಡ ಮತ್ತು ಅವರ ಬೇಡಿಕೆಗಳ ಕುರಿತು ಹೈಕಮಾಂಡ್ಗೆ ಸಂಪೂರ್ಣ ಮಾಹಿತಿ ನೀಡಲಾಗಿದೆ ಎನ್ನಲಾಗಿದೆ. ಆಪ್ತ ಶಾಸಕರು ಬಂಡೇಳುವ ಮುನ್ನವೇ ಮಾತುಕತೆ ನಡೆಸಬೇಕು ಎಂಬ ಸಂದೇಶವನ್ನು ಡಿಕೆಶಿ ಶಿಬಿರ ರವಾನಿಸಿರುವ ಸಾಧ್ಯತೆ ಇದೆ.
ರಾಜ್ಯದ ಬಜೆಟ್ ಬಳಿಕವೇ ಅಧಿಕಾರ ಹಂಚಿಕೆ ವಿಚಾರ ಇತ್ಯರ್ಥಪಡಿಸಬೇಕು, ಕೊಟ್ಟ ಮಾತಿನಂತೆ ನ್ಯಾಯ ಸಿಗಬೇಕು ಎಂಬುದು ಡಿಕೆಶಿ ಹಾಗೂ ಅವರ ಆಪ್ತ ಶಾಸಕರ ಸ್ಪಷ್ಟ ಹಕ್ಕೊತ್ತಾಯವಾಗಿದೆ. ಇದೀಗ ಕಾಂಗ್ರೆಸ್ ಒಳಗಿನ ಈ ಪವರ್ ಫೈಟ್, ಸಮಾಧಾನದತ್ತ ಸಾಗುತ್ತಾ…? ಅಥವಾ ಮತ್ತೊಂದು ರಾಜಕೀಯ ಗೊಂದಲಕ್ಕೆ ದಾರಿ ಮಾಡಿಕೊಡುತ್ತಾ…? ಎಂಬುದನ್ನು ಕಾದು ನೋಡಬೇಕಾಗಿದೆ.
