Ashwaveega News 24×7 ಮಾರ್ಚ್ 24 – 2026 : ಮುಸ್ಲಿಮರ ಮನವೊಲಿಕೆಗೆ ಡಿಸಿಎಂ ಡಿ.ಕೆ. ಶಿವಕುಮಾರ್ ಎಂಟ್ರಿ ನೀಡಿದ್ದಾರೆ . ದಾವಣಗೆರೆ ಉಪಚುನಾವಣೆಯಲ್ಲಿ ಗೆಲುವು ಸಾಧಿಸಲು ಕೈ ನಾಯಕರು ತಂತ್ರ ರೂಪಿಸುತ್ತಿದ್ದು, ಅಸಮಾಧಾನಗೊಂಡ ಮುಸ್ಲಿಂ ಸಮುದಾಯವನ್ನು ಸಮಾಧಾನಪಡಿಸಲು ಚಟುವಟಿಕೆಗಳು ಜೋರಾಗಿದೆ.
ಶಾಮನೂರು ಶಿಷ್ಯ ಸಾದಿಕ್ ಪೈಲ್ವಾನ್ ಅವರನ್ನು ಮನವೊಲಿಸಲು ಪ್ರಯತ್ನಗಳು ನಡೆಯುತ್ತಿದ್ದು, ಮುಸ್ಲಿಮರ ಸಿಟ್ಟು ತಣಿಸಲು ಕಾಂಗ್ರೆಸ್ ನಾಯಕರು ನಿರಂತರ ಸಭೆಗಳು, ಮಾತುಕತೆಗಳನ್ನು ನಡೆಸುತ್ತಿದ್ದಾರೆ.
ಈ ಕುರಿತು ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ರಾಜಕೀಯದಲ್ಲಿ ಎಲ್ಲರಿಗೂ ಟಿಕೆಟ್ ಕೇಳುವ ಹಕ್ಕಿದೆ. ಅದೇ ರೀತಿಯಾಗಿ ದಾವಣಗೆರೆಯಲ್ಲಿ ಮುಸ್ಲಿಮರು ಟಿಕೆಟ್ ಕೇಳಿರುವುದು ಸಹಜ ಎಂದು ಹೇಳಿದ್ದಾರೆ.
ಮುಂದಿನ ದಿನಗಳಲ್ಲಿ ಮುಸ್ಲಿಂ ಸಮುದಾಯಕ್ಕೆ ನ್ಯಾಯ ಒದಗಿಸಲಾಗುತ್ತದೆ ಎಂಬ ಭರವಸೆಯನ್ನೂ ಅವರು ನೀಡಿದ್ದಾರೆ. ಈ ಹಿಂದೆಯೂ ಕಾಂಗ್ರೆಸ್ ಪಕ್ಷ ಮುಸ್ಲಿಮರಿಗೆ ಸಾಕಷ್ಟು ರಾಜಕೀಯ ಅವಕಾಶಗಳನ್ನು ನೀಡಿದೆ ಎಂದು ಅವರು ನೆನಪಿಸಿದರು. ಉಪಚುನಾವಣೆಗೆ ಸಮರ್ಥ ಅಭ್ಯರ್ಥಿಯ ಹೆಸರನ್ನು ಮುಖಂಡರು ಸೂಚಿಸಿದ್ದರು. ಅವರ ಸಲಹೆಯ ಮೇರೆಗೆ ಟಿಕೆಟ್ ನೀಡಲಾಗಿದೆ ಎಂದು ಡಿಕೆಶಿ ಸ್ಪಷ್ಟಪಡಿಸಿದರು.
ಅಬ್ದುಲ್ ಜಬ್ಬಾರ್ ಅವರನ್ನು ಮೂರು ಬಾರಿ ಎಂಎಲ್ಸಿ ಮಾಡಿದ್ದೇವೆ. ರಾಜ್ಯಸಭೆ, ಪರಿಷತ್ ಹಾಗೂ ನಿಗಮ ಮಂಡಳಿಗಳಲ್ಲೂ ಮುಸ್ಲಿಮರಿಗೆ ಸ್ಥಾನಮಾನ ನೀಡಲಾಗಿದೆ ಎಂದು ಹೇಳಿದರು. ಮುಂದಿನ ದಿನಗಳಲ್ಲಿಯೂ ಮುಸ್ಲಿಮರಿಗೆ ಟಿಕೆಟ್ ನೀಡಲಾಗುತ್ತದೆ. ಅವರ ಬೇಡಿಕೆಗಳಿಗೆ ಸ್ಪಂದಿಸಲಾಗುತ್ತದೆ ಎಂದು ಕಾಂಗ್ರೆಸ್ ನಾಯಕರು ಭರವಸೆ ನೀಡುತ್ತಿದ್ದಾರೆ.
ಒಟ್ಟಾರೆ, ದಾವಣಗೆರೆ ಉಪಚುನಾವಣೆಯಲ್ಲಿ ಮುಸ್ಲಿಂ ಮತದಾರರನ್ನು ತನ್ನತ್ತ ಸೆಳೆಯಲು ಕಾಂಗ್ರೆಸ್ ನಾಯಕರು ಸಕಲ ಪ್ರಯತ್ನಗಳನ್ನು ಕೈಗೊಂಡಿರುವುದು ಸ್ಪಷ್ಟವಾಗಿದೆ.
