
ಸ್ಟ್ರಾಬೆರಿ ಹಣ್ಣು ಅಂದರೆ ಯಾರಿಗೆ ತಾನೇ ಇಷ್ಟ ಇರಲ್ಲ ಹೇಳಿ. ಈ ಹಣ್ಣಿನ ರುಚಿಯೇ ವಿಭಿನ್ನ. ಈ ಸ್ಟ್ರಾಬೆರಿ ಫ್ರಾಗೇರಿಯಾವು ಗುಲಾಬಿ ತಳಿಯ ಕುಟುಂಬಕ್ಕೆ ಸೇರಿವೆ. ಇದು ವಿಶ್ವದ ಅತ್ಯಂತ ಜನಪ್ರಿಯ ಬೆರ್ರಿ ಹಣ್ಣುಗಳಲ್ಲಿ ಒಂದಾಗಿದ್ದು, ಪರಿಮಳ, ಗಾತ್ರ ಮತ್ತು ವಿನ್ಯಾಸದಲ್ಲಿ ಭಿನ್ನವಾಗಿರುವ 10 ಕ್ಕೂ ಹೆಚ್ಚು ಜಾತಿಯ ಫ್ರಾಗೇರಿಯಾಗಳಿವೆ. ಆದರೆ ಇದರ ವಿಶೇಷತೆ ಎಂದರೆ ಅವೆಲ್ಲವೂ ಹೃದಯದ ಆಕಾರದ, ಕೆಂಪು ಮೇಲ್ಪದರವನ್ನು ಹೊಂದಿವೆ. ಸ್ಟ್ರಾಬೆರಿಗಳು ವಾಸ್ತವವಾಗಿ ಹಣ್ಣುಗಳಲ್ಲ ಏಕೆಂದರೆ ಅವುಗಳಲ್ಲಿ ಬೀಜಗಳು ಹೊರ ಭಾಗದಲ್ಲಿ ಕಾಣಸುತ್ತೆ. ಹಾಗೆಯೇ ಈ ಹಣ್ಣುಗಳಲ್ಲಿ ಹಲವು ಆರೋಗ್ಯಕರ ಪ್ರಯೋಜನಗಳಿವೆ. ಇನ್ನೂ ಈ ಹಣ್ಣಿನ ಆರೋಗ್ಯ ಪ್ರಯೋಜನದ ಬಗ್ಗೆ ಒಂದಷ್ಟು ಮಾಹಿತಿ ತಿಳಿಯೋಣ ಬನ್ನಿ.
ಗಾರ್ಡನ್ ಸ್ಟ್ರಾಬೆರಿಯು ಫ್ರಗೇರಿಯ ವರ್ಗಕ್ಕೆ ಸೇರಿದ ಸಾಮಾನ್ಯ ಸಸ್ಯವಾಗಿದ್ದು, ಸ್ಟ್ರಾಬೆರಿ ಎಂದು ಕರೆಯಲ್ಪಡುವ ಈ ಹಣ್ಣಿಗಾಗಿ ಪ್ರಪಂಚದಾದ್ಯಂತ ಇದನ್ನು ಬೆಳೆಯಲಾಗುತ್ತದೆ. ಈ ಹಣ್ಣು ಮುಖ್ಯವಾಗಿ ಅದರ ವಾಸನೆಗಾಗಿ ಹಾಗೂ ಗಾಢವಾದ ಕೆಂಪು ಬಣ್ಣಕ್ಕಾಗಿಯೂ ಕೂಡ ಹೆಚ್ಚಾಗಿ ಪ್ರಸಿದ್ಧಿಯಾಗಿದೆ. ಅಲ್ಲದೇ ತಾಜಾ ಹಣ್ಣುಗಳ ರೂಪದಲ್ಲಿ ಇರುತ್ತೆ. ಉದಾಹರಣೆಗೆ ಸ್ಟ್ರಾಬೆರಿಯನ್ನು ಹಣ್ಣಿನ ರಸಗಳಲ್ಲಿ, ಆಕೃತಿಗಳಲ್ಲಿ, ಐಸ್ ಕ್ರೀಮ್ಗಳಲ್ಲಿ ಹಾಗೂ ಮಿಲ್ಕ್ ಶೇಕ್ ಇತ್ಯಾದಿಗಳಲ್ಲಿ ಇದನ್ನು ದೊಡ್ಡ ಪ್ರಮಾಣದಲ್ಲಿ ಬಳಸಲಾಗುತ್ತದೆ.
ಸ್ಟ್ರಾಬೆರಿಯ ಕೃತಕ ಪರಿಮಳವನ್ನು ಕೈಗಾರಿಕೀಕರಿಸಲ್ಪಟ್ಟ ಎಲ್ಲಾ ರೀತಿಯ ಆಹಾರ ಉತ್ಪನ್ನಗಳಲ್ಲಿಯೂ ಕೂಡ ಹೆಚ್ಚಾಗಿ ಬಳಸಲಾಗುತ್ತದೆ. ವ ಗಾರ್ಡನ್ ಸ್ಟ್ರಾಬೆರಿ ಯನ್ನು ಮೊಟ್ಟ ಮೊದಲನೆಯ ಬಾರಿಗೆ 1740 ರಲ್ಲಿ ಫ್ರಾನ್ಸ್ ನ ಬ್ರಿಟನಿ ಪೂರ್ವೋತ್ತರ ಅಮೇರಿಕಾದಿಂದ ತೆಗೆದುಕೊಳ್ಳಲಾದ ಫ್ರಗೇರಿಯ ವರ್ಗಿನಿನ ಎಂಬ ಮಿಶ್ರ ತಳಿಯ ಮೂಲಕ ಬೆಳೆಯಲಾಯಿತು. ಈ ತಳಿಯು ಅದರ ರುಚಿಗೆ ಅತ್ಯಂತ ಹೆಸರುವಾಸಿಯಾಗಿತ್ತು.
ಸ್ಟ್ರಾಬೆರಿಯಲ್ಲಿ 0.6 ಗ್ರಾಂ ಪ್ರೋಟೀನ್, 0.2 ಗ್ರಾಂ ಕೊಬ್ಬಿನ ಅಂಶ, 6 ಗ್ರಾಂ ಕಾರ್ಬೋಹೈಡ್ರೇಟ್ಗಳು, 1.6 ಗ್ರಾಂ ಫೈಬರ್, 136 ಮಿಗ್ರಾಂ ಪೊಟ್ಯಾಸಿಯಮ್, 49 ಎಂಸಿಜಿ ಫೋಲೇಟ್, 46 ಮಿಗ್ರಾಂ ವಿಟ್ ಸಿ ಇದೆ. ಇದಷ್ಟೇ ಅಲ್ಲದೇ ಸ್ಟ್ರಾಬೆರಿಯಲ್ಲಿ ವಿಟಮಿನ್ ಸಿ, ಮೆಗ್ನೀಸಿಯಮ್, ಫೋಲೇಟ್, ಪೊಟ್ಯಾಸಿಯಮ್ ಸಮೃದ್ಧವಾಗಿದ್ದು , ಉತ್ಕರ್ಷಣ ನಿರೋಧಕಗಳನ್ನು ಸಹ ಒಳಗೊಂಡಿದೆ.
ಅದರಲ್ಲೂ ತೂಕ ಇಳಿಕೆಗೆ ಸ್ಟ್ರಾಬೆರಿ ಹೆಚ್ಚು ಸಹಾಯಕವಾಗಿದೆ . ಸ್ಟ್ರಾಬೆರಿ ಕಡಿಮೆ ಕ್ಯಾಲೋರಿ ಮತ್ತು ಹೆಚ್ಚಿನ ಫೈಬರ್ ಹೊಂದಿರುವ ಹಣ್ಣಾಗಿದ್ದು, ಇದನ್ನು ತಿನ್ನುವುದರಿಂದ ದೀರ್ಘಕಾಲ ಹಸಿವಾಗುವುದಿಲ್ಲ ಮತ್ತು ಹೊಟ್ಟೆ ತುಂಬಿದ ಭಾವನೆ ಇರುತ್ತದೆ. ಹಾಗಂತ ಅತಿಯಾಗಿ ತಿನ್ನಬಾರದು. ಆದರೆ ಸ್ಟ್ರಾಬೆರಿಯನ್ನು ನಿರಂತರವಾಗಿ ಪ್ರತಿದಿನ ಸೇವಿಸಿದರೆ, ನೀವು ತೂಕವನ್ನು ಕಳೆದುಕೊಳ್ಳಲು ಪ್ರಾರಂಭಿಸುತ್ತೀರಿ. ಈ ಹಣ್ಣನ್ನು ತಿನ್ನುವುದರೊಂದಿಗೆ ವ್ಯಾಯಾಮವನ್ನು ಮಾಡಿದರೆ, ಶೀಘ್ರದಲ್ಲೇ ಉತ್ತಮ ಫಲಿತಾಂಶವನ್ನು ಕಾಣುತ್ತೀರಿ.
ಸ್ಟ್ರಾಬೆರಿಗಳು ಫ್ಲೇವನಾಯ್ಡ್, ಪೊಟ್ಯಾಸಿಯಮ್ ಮತ್ತು ಫೈಬರ್ನಂತಹ ಪೋಷಕಾಂಶಗಳಲ್ಲಿ ಸಮೃದ್ಧವಾಗಿವೆ. ಇವು ರಕ್ತದೊತ್ತಡವನ್ನು ಸ್ಥಿರವಾಗಿಡಲು ಸಹಾಯ ಮಾಡುತ್ತವೆ. ಅಲ್ಲದೇ ಹೃದಯ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ಈ ಹಣ್ಣಿನಲ್ಲಿರುವ ಉತ್ಕರ್ಷಣ ನಿರೋಧಕಗಳು ಹೃದಯಕ್ಕೂ ಒಳ್ಳೆಯದು.
ಸ್ಟ್ರಾಬೆರಿ ವಿಟಮಿನ್ ಸಿ, ಆಂಟಿಆಕ್ಸಿಡೆಂಟ್ಗಳು ಮತ್ತು ಇತರ ಪೋಷಕಾಂಶಗಳನ್ನು ಹೊಂದಿದ್ದು, ದೃಷ್ಟಿ ಸುಧಾರಿಸಲು ಸಹಾಯ ಮಾಡುತ್ತದೆ. ಇದಲ್ಲದೇ ಸ್ಟ್ರಾಬೆರಿಗಳನ್ನು ನಿಯಮಿತವಾಗಿ ಸೇವಿಸುವುದರಿಂದ ವಯಸ್ಸಿಗೆ ಸಂಬಂಧಿಸಿದ ಕಣ್ಣಿನ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು. ಸ್ಟ್ರಾಬೆರಿಯಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ. ಇದು ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ. ವೈರಲ್ ಸೋಂಕುಗಳ ವಿರುದ್ಧ ಹೋರಾಡಲು ಮತ್ತು ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯಕವಾಗಿದೆ.