Ashwaveega News 24×7 – ಜನವರಿ 11 – ಭಾರತ ತಂಡದ ಮಾಜಿ ಅನುಭವಿ ಆರಂಭಿಕ ಬ್ಯಾಟರ್ ಶಿಖರ್ ಧವನ್ ಅವರ ಅಭಿಮಾನಿಗಳಿಗೆ ಒಂದು ಸಿಹಿ ಸುದ್ದಿ ಸಿಕ್ಕಿದೆ. ಗಬ್ಬರ್ ಎಂದೇ ಖ್ಯಾತಿ ಪಡೆದಿರುವ ಶಿಖರ್ ಧವನ್ ಎರಡನೇ ಬಾರಿ ಹಸೆಮಣೆ ಏರಲು ರೆಡಿಯಾಗಿದ್ದಾರೆ. ಶಿಖರ್ ಧವನ್ ತಮ್ಮ ಗೆಳತಿ ಸೋಫಿ ಶೈನ್ ಅವರನ್ನು ಮದುವೆಯಾಗಲಿದ್ದಾರೆ. ಈ ಅದ್ದೂರಿ ಮದುವೆ ಗೆ ದೆಹಲಿ-ಎನ್ಸಿಆರ್ನಲ್ಲಿ ಸಿದ್ಧತೆಗಳು ಭರದಿಂದ ಸಾಗುತ್ತಿವೆ.
ಟೀಂ ಇಂಡಿಯಾದ ಮಾಜಿ ಆರಂಭಿಕ ಆಟಗಾರ ಶಿಖರ್ ಧವನ್ ತಮ್ಮ ವೈಯಕ್ತಿಕ ಜೀವನದಲ್ಲಿ ಹೊಸ ಅಧ್ಯಾಯ ಆರಂಭಿಸಲು ಸಜ್ಜಾಗಿದ್ದಾರೆ. ಧವನ್ ತಮ್ಮ ದೀರ್ಘಕಾಲದ ಗೆಳತಿ ಸೋಫಿ ಶೈನ್ ಅವರನ್ನು ಫೆಬ್ರವರಿಯಲ್ಲಿ ವಿವಾಹವಾಗಲಿದ್ದಾರೆ.

ವರದಿಯಂತೆ, ಫೆಬ್ರವರಿ ಮೂರನೇ ವಾರದಲ್ಲಿ ದೆಹಲಿ–ಎನ್ಸಿಆರ್ ಪ್ರದೇಶದಲ್ಲಿ ವಿವಾಹ ಸಮಾರಂಭ ನಡೆಯಲಿದೆ. ಈ ಮದುವೆಗೆ ಕ್ರಿಕೆಟ್ ಮತ್ತು ಬಾಲಿವುಡ್ ಜಗತ್ತಿನ ಅನೇಕ ಗಣ್ಯರು ಆಹ್ವಾನಿತರಾಗುವ ನಿರೀಕ್ಷೆಯಿದೆ. ಸದ್ಯ ಮದುವೆಯ ಸಿದ್ಧತೆಗಳು ಭರದಿಂದ ಸಾಗುತ್ತಿವೆ ಎನ್ನಲಾಗಿದೆ.
ಆದರೆ ಈ ವಿಚಾರಕ್ಕೆ ಸಂಬಂಧಿಸಿದಂತೆ ಶಿಖರ್ ಧವನ್, ಅವರ ಕುಟುಂಬ ಅಥವಾ ಸೋಫಿ ಶೈನ್ ಯಾರೂ ಇದುವರೆಗೆ ಅಧಿಕೃತವಾಗಿ ಪ್ರತಿಕ್ರಿಯೆ ನೀಡಿಲ್ಲ. ಲಭ್ಯವಿರುವ ಮಾಹಿತಿಯ ಪ್ರಕಾರ, ಆಪ್ತ ಸ್ನೇಹಿತರು ಹಾಗೂ ಕುಟುಂಬ ಸದಸ್ಯರು ಮಾತ್ರ ಭಾಗವಹಿಸುವ ಖಾಸಗಿ ಸಮಾರಂಭವಾಗಿ ಮದುವೆ ನಡೆಯಲಿದೆ ಎಂದು ಹೇಳಲಾಗುತ್ತಿದೆ.

ಶಿಖರ್ ಧವನ್ ಅವರನ್ನು ವರಿಸಲಿರುವ ಸೋಫಿ ಶೈನ್ ಐರಿಶ್ ಪ್ರಜೆಯಾಗಿದ್ದು, ಲಿಮೆರಿಕ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ಮಾರ್ಕೆಟಿಂಗ್ ಮತ್ತು ಮ್ಯಾನೇಜ್ಮೆಂಟ್ನಲ್ಲಿ ಪದವಿ ಪಡೆದಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುವ ಸೋಫಿ, ಇನ್ಸ್ಟಾಗ್ರಾಮ್ನಲ್ಲಿ 3.43 ಲಕ್ಷಕ್ಕೂ ಹೆಚ್ಚು ಅನುಯಾಯಿಗಳನ್ನು ಹೊಂದಿದ್ದಾರೆ. ಇತ್ತೀಚಿನ ತಿಂಗಳುಗಳಲ್ಲಿ ಶಿಖರ್ ಧವನ್ ಅವರೊಂದಿಗೆ ತೆಗೆದ ಫೋಟೋಗಳನ್ನು ಅವರು ನಿರಂತರವಾಗಿ ಹಂಚಿಕೊಳ್ಳುತ್ತಿದ್ದಾರೆ.
ಕೆಲವು ವರ್ಷಗಳ ಹಿಂದೆ ದುಬೈನಲ್ಲಿ ಪರಿಚಯವಾದ ಈ ಜೋಡಿ, ಕಾಲಕ್ರಮೇಣ ಪ್ರೀತಿಯಲ್ಲಿ ಬಿದ್ದಿದ್ದು, ಕಳೆದ ಒಂದು ವರ್ಷದಿಂದ ಒಟ್ಟಿಗೆ ವಾಸಿಸುತ್ತಿದ್ದಾರೆ ಎನ್ನಲಾಗಿದೆ. ಪ್ರಸ್ತುತ ಸೋಫಿ ಶಿಖರ್ ಧವನ್ ಫೌಂಡೇಶನ್ನ ಕಾರ್ಯನಿರ್ವಹಣೆಯ ಜವಾಬ್ದಾರಿಯನ್ನೂ ನೋಡಿಕೊಳ್ಳುತ್ತಿದ್ದಾರೆ.
