Ashwaveega News 24×7 ಮಾರ್ಚ್ 31 – 2026 : ರಾಷ್ಟ್ರೀಯ ಹೆದ್ದಾರಿಯಲ್ಲಿ ಮತ್ತೊಮ್ಮೆ ನಿರ್ಲಕ್ಷ್ಯ ಮತ್ತು ಅಜಾಗರೂಕತೆಯ ದೃಶ್ಯ ಬೆಳಕಿಗೆ ಬಂದಿದೆ. ನೆಲಮಂಗಲ ಸಮೀಪದ ಹೈವೇಯಲ್ಲಿ ಕುಡುಕನೊಬ್ಬ ಸನ್ರೂಫ್ ಮೂಲಕ ಹೊರಬಂದು ಹುಚ್ಚಾಟ ನಡೆಸಿರುವ ಘಟನೆ ಆತಂಕಕ್ಕೆ ಕಾರಣವಾಗಿದೆ.
ಬೆಂಗಳೂರಿನಲ್ಲಿ ನೋಂದಾಯಿತ KA 01 MM 7215 ಸಂಖ್ಯೆಯ ಕಾರಿನಲ್ಲಿ ಸಂಚರಿಸುತ್ತಿದ್ದ ವ್ಯಕ್ತಿ, ವಾಹನ ಚಲಿಸುತ್ತಿರುವಾಗಲೇ ಸನ್ರೂಫ್ ತೆರೆದು ನಿಂತು ಎಣ್ಣೆ ಹೊಡೆದ ಸ್ಥಿತಿಯಲ್ಲಿ ಹಂಗಾಮಾ ಮಾಡಿದ್ದಾನೆ. ಇದರಿಂದ ಇತರ ವಾಹನ ಸವಾರರ ಸುರಕ್ಷತೆಗೂ ಭಾರಿ ಅಪಾಯ ಉಂಟಾಗಿದೆ.
ಈ ಘಟನೆಗೆ ಸಂಬಂಧಿಸಿದ ದೃಶ್ಯವನ್ನು ಮಹಿಳೆಯೊಬ್ಬರು ಮೊಬೈಲ್ನಲ್ಲಿ ಸೆರೆ ಹಿಡಿದಿದ್ದಾರೆ. ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.
“ರಾಜ್ಯದಲ್ಲಿ ಯಾರಿಗೂ ಪೊಲೀಸರ ಭಯವೇ ಇಲ್ಲವೇ?” ಎಂದು ಪ್ರಶ್ನಿಸಿರುವ ಮಹಿಳೆ, ಇಂತಹ ಅಜಾಗರೂಕ ವರ್ತನೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ರಸ್ತೆ ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸಿ ಈ ರೀತಿಯ ಸಾಹಸ ಪ್ರದರ್ಶಿಸುವುದು ಕಾನೂನುಬಾಹಿರವಾಗಿದ್ದು, ಸಂಬಂಧಿಸಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.
ಒಟ್ಟಾರೆ, ಈ ಘಟನೆ ರಸ್ತೆ ಸುರಕ್ಷತೆ ಬಗ್ಗೆ ಮತ್ತೆ ಚರ್ಚೆ ಹುಟ್ಟಿಸಿದ್ದು, ಇಂತಹ ಘಟನೆಗಳು ಮರುಕಳಿಸದಂತೆ ಕಟ್ಟುನಿಟ್ಟಿನ ಕ್ರಮಗಳ ಅಗತ್ಯತೆ ಎತ್ತಿಹಿಡಿದಿದೆ.
